ಗದಗ : ಶ್ರೀ ಸಿದ್ಧಾರೂಢ ಕಥಾಮೃತ ಗ್ರಂಥದ ಶತಮಾನೋತ್ಸವ ನಿಮಿತ್ತ ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥಯಾತ್ರೆ ವೈಭವದಿಂದ ನಡೆಯುತ್ತಿದೆ. ಸಿದ್ಧಾರೂಢರ ಜನ್ಮಸ್ಥಳ ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಚಳಕಾಪೂರದಿಂದ ಆರಂಭವಾಗಿರುವ ರಥಯಾತ್ರೆಯು ಗದಗ ಜಿಲ್ಲೆ ತಲುಪಿದೆ. ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಾನಿಧ್ಯದಲ್ಲಿ ಶ್ರೀ ಸಿದ್ಧಾರೂಢ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ಎಲ್ಲಾ ಧರ್ಮಿಯರು, ಎಲ್ಲಾ ಜಾತಿಯವರು ಒಂದು ಎಂದು ನಡೆದುಕೊಳ್ಳುವ ಶ್ರದ್ಧಾಕೇಂದ್ರ ಅದು ಸಿದ್ಧಾರೂಢ ಮಠ. ಸಿದ್ಧಾರೂಢ ಮಠವು ಮನುಕುಲ ಒಂದಾಬೇಕು ಎಂಬ ಸಂದೇಶ ನೀಡುತ್ತ ರಾಜ್ಯ-ದೇಶದಲ್ಲಿ ಪ್ರಖ್ಯಾತಿ ಪಡೆದಿದೆ ಎಂದರು.
ತೋಂಟದಾರ್ಯ ಮಠದಿಂದ ಆರಂಭವಾದ ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥ ಯಾತ್ರೆಯು ಕೆ.ಸಿ. ರಾಣಿ ರಸ್ತೆಯ ಮೂಲಕ ವೀರೇಶ್ವರ ಪುಣ್ಯಾಶ್ರಮ, ಅಲ್ಲಿಂದ ಭೂಮರಡ್ಡಿ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ ಕಳಸಾಪೂರ ರಸ್ತೆ ಮೂಲಕ ಶ್ರೀ ಜಗದ್ಗುರು ಶಿವಾನಂದ ಮಠ ತಲುಪಿತು. ಈ ಸಂದರ್ಭದಲ್ಲಿ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ್, ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ, ಶ್ರೀ ಸಿದ್ಧಾರೂಢ ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಡಿ.ಆರ್. ಪಾಟೀಲ್, ಮಾಜಿ ಶಾಸಕರಾದ ಬಿ.ಆರ್. ಯಾವಗಲ್ಲ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು
![Demo](https://prajatvkannada.com/wp-content/uploads/2023/08/new-Aston-Band.jpeg)