ಮುಂಬೈ: ನಿನ್ನೆಯಷ್ಟೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ವಿಶ್ವಕಪ್ ಟೂರ್ನಿಯಲ್ಲಿ ಬೆಂಕಿ ಬ್ಯಾಟಿಂಗ್ ಮಾಡ್ತಾರೆ ಎಂದು ಹೇಳಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ಜೊತೆಗೆ ಕಿರಿಕ್ ಮಾಡಿದ್ದ ನವೀನ್ ಉಲ್ ಹಕ್ನನ್ನ ಬಾಯ್ತುಂಬ ಹೊಗಳಿದ್ದಾರೆ.
ಗಂಭೀರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟಿಗ ನವೀನ್ ಉಲ್ ಹಕ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ನಿಮ್ಮಂಥವರು ಬಹಳ ಕಡಿಮೆ, ಎಂದಿಗೂ ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಮತ್ತೆ ಗಂಭೀರ್ ಅವರನ್ನ ಕೆಣಕುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಬಾಬರ್ ಆಜಂ ಅವರನ್ನ ಹೊಗಳಿರುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.
2023ರ ಐಪಿಎಲ್ ಟೂರ್ನಿವೇಳೆ ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ಗಳ ಜಯ ಸಾಧಿಸಿತು. ಈ ಹಿಂದೆ ಆರ್ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಅಂದು ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು.