ಗಾಂಧೀನಗರ: ನಕಲಿ ನೋಟುಗಳ ಪ್ರಕರಣ ಬೇಧಿಸಿದ ಗುಜರಾತ್ ಪೊಲೀಸರು ಶಾಕ್ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರ ಬಳಸಿರುವುದು ಕಂಡುಬಂದಿದೆ. ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಹಮದಾಬಾದ್ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್ ಆಗಿರುವ ವೀಡಿಯೋವನ್ನು ಟ್ಯಾಗ್ ಮಾಡಿ ಅನುಪಮ್ ಖೇರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.
ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು ಒಳಗೊಂಡ ಡೀಲ್ಗಾಗಿ ಶಂಕಿತರು ತಮ್ಮ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದರು. ಉಳಿದ 30 ಲಕ್ಷವನ್ನು ಮರುದಿನ ಪಾವತಿಸುವುದಾಗಿ ಭರವಸೆ ನೀಡಿ, 1.3 ಕೋಟಿ ನಗದು ನೀಡಿದ್ದಾರೆ. ಆದರೆ, ಚಿನ್ನವನ್ನು ಹಸ್ತಾಂತರಿಸಿದ ನಂತರ ಅವರು ಎಸ್ಕೇಪ್ ಆದರು. ಎಲ್ಲಾ ನೋಟುಗಳನ್ನು ಗಮನಿಸಿದಾಗ ನಕಲಿ ಎಂದು ತಿಳಿಯಿತು. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.