ಪ್ರತಿ ಹಬ್ಬಕ್ಕೂ ಕೇಸರಿ ಬಾತ್, ಪಾಯಸ ಅದೇ ಸಿಹಿ ತಿಂಡಿ ಮಾಡಿ ಬೇಸರವಾಗಿದ್ದರೆ ಈ ಬಾರಿ ಗೌರಿ ಹಬ್ಬಕ್ಕಾಗಿ ಬೇಗ ಹಾಗೂ ಸುಲಭವಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ ನಾವಿಂದು ಹೇಳಿಕೊಡುತ್ತಿದ್ದೇವೆ.
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – ಅರ್ಧ ಕೆಜಿ
ಉಪ್ಪು – ಚಿಟಿಕೆ
ಎಣ್ಣೆ – ಕರಿಯಲು
ಕೊಬ್ಬರಿ – ಅರ್ಧ ಕೆಜಿ
ಸಕ್ಕರೆ – ಕಾಲು ಕೆಜಿ
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ:
* ಮೈದಾ ಹಿಟ್ಟನ್ನು ಜರಡಿ ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
* ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ, ಏಲಕ್ಕಿ ಪುಡಿಯನ್ನು ಬೆರೆಸಿಡಿ.
* ಇತ್ತ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿಯಂತೆ ಲಟ್ಟಿಸಿ.
* ಹೀಗೆ ಲಟ್ಟಿಸಿದ ಹಿಟ್ಟಿನ ಮಧ್ಯ ಭಾಗದಲ್ಲಿ ಕೊಬ್ಬರಿ ಮಿಶ್ರಿತ ಊರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ. (ಮಾರ್ಕೆಟ್ನಲ್ಲಿ ಸಿಗುವ ಕರ್ಜಿಕಾಯಿ ಮೌಲ್ಡ್ ಬಳಸಬಹುದು)
* ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
* ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು.