ಲಖನೌ: ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿ 22ಕ್ಕೆ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಮಾಜಿ ಆರಂಭಿಕ ಗೌತಮ್ ಗಂಭೀರ್ ಮುಕ್ತ ಕಂಠದಿಂದ ಪ್ರಶಂಸಿಸಿದ್ದು, ಕಮ್ ಬ್ಯಾಕ್ ಪಂದ್ಯಗಳಲ್ಲಿ ಇಷ್ಟೊಂದು ಪರಿಣಾಮಕಾರಿ ಬೌಲಿಂಗ್ ಮಾಡಿದ ಬೌಲರ್ ಅನ್ನು ನಾನು ನೋಡಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ 4 ಪಂದ್ಯಗಳಿಂದ ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ, ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದು, ಕಮ್ ಬ್ಯಾಕ್ ಪಂದ್ಯಗಳಲ್ಲಿ ಅದೂ ಚೇಸಿಂಗ್ ವೇಳೆ ಇಷ್ಟೊಂದು ಅದ್ಭುತ ಬೌಲಿಂಗ್ ಸಂಘಟಿಸಿದ್ದನ್ನು ನಾನು ನೋಡೇ ಇಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ 2011ರ ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್, ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್ ಗಳು ತೋರಿದ ಬೌಲಿಂಗ್ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ.“ನಾನು ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನವೇ ನಮಗೆ ಬೌಲರ್ ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ, ಬ್ಯಾಟ್ಸ್ ಮನ್ ಗಳಲ್ಲ ಎಂಬ ಮಾತನ್ನು ಹೇಳಿದ್ದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್ ಗಳು ಅದ್ಭುತ ಪ್ರದರ್ಶನ ತೋರುವ ಮೂಲಕ ಆ ಮಾತನ್ನು ಸಾಬೀತುಪಡಿಸಿದ್ದಾರೆ,” ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.