ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ದೇಶಿ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಗೆ 2024ರ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ನೀಡಲೇಬೇಕೆಂದು ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ. ನ್ಯೂಸ್ 18 ಜತೆ ಮಾತನಾಡಿರುವ ಅವರು, ಜೈಸ್ವಾಲ್ ಗೆ ಟಿ 20 ತಂಡದಲ್ಲಿ ಸ್ಥಾನ ನೀಡಲು ಇದು ಸರಿಯಾದ ಸಮಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 14 ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕದ ನೆರವಿನಿಂದ 625 ರನ್ ಸಿಡಿಸಿದ್ದು, ಅಲ್ಲದೆ ದೇಶಿ ಕ್ರಿಕೆಟ್ ನಲ್ಲೂ ತಮ್ಮ ಬ್ಯಾಟಿಂಗ್ ವೈಭವ ಮೆರೆದು ವಿಜಯ್ ಹಜಾರೆ ಟೂರ್ನಿಯಲ್ಲಿ 17 ವರ್ಷ 292 ದಿನಗಳಲ್ಲೇ ದ್ವಿಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ 171 ರನ್ ಬಾರಿಸಿ ಹಲವು ದಾಖಲೆ ನಿರ್ಮಿಸಿ ದ್ವಿತೀಯ ಟೆಸ್ಟ್ ನಲ್ಲೂ 57 ರನ್ ಸಿಡಿಸಿ ಸಂಭ್ರಮಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅಪ್ಪಟ ಪ್ರತಿಭೆ
“ಭಾರತ ತಂಡದಲ್ಲಿ ಒಂದು ಸಮಸ್ಯೆ ಏನೆಂದರೆ 2 ತಿಂಗಳ ಕಾಲ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ನೇರವಾಗಿ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಆದರೆ ಯಶಸ್ವಿ ಜೈಸ್ವಾಲ್ ದೇಶಿಯ ಕ್ರಿಕೆಟ್ ನ ಪ್ರಥಮ ದರ್ಜೆ ಹಾಗೂ ಏಕದಿನ ಸ್ವರೂಪದಲ್ಲೂ ಶತಕ ಸಿಡಿಸಿದ್ದಾರೆ,” ಎಂದು ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಶ್ಲಾಘಿಸಿದ್ದಾರೆ.
ರಿಂಕು ಸಿಂಗ್ ದೇಶಿ ಕ್ರಿಕೆಟ್ ಆಡಲಿ
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಪರ ಭಯಮುಕ್ತ ಹಾಗೂ ಆಕ್ರಮಣಕಾರಿ ಆಟವಾಡಿದ ರಿಂಕು ಸಿಂಗ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳುವ ಮುನ್ನ ದೇಶಿ ಕ್ರಿಕೆಟ್ ನಲ್ಲಿ ಆಡುವಂತೆ ಸೂಚಿಸಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
“ರಿಂಕು ಸಿಂಗ್ ಅವರ ಕಥೆ ಸಾಕಷ್ಟು ಸ್ಫೂರ್ತಿದಾಯಕವಾಗಿದೆ. ಅವನು ನಿಜಕ್ಕೂ ಉತ್ತಮ ಆಟಗಾರ.ಆದರೆ ಒಂದೇ ಆವೃತ್ತಿಯ ಆಧಾರದ ಮೇಲೆ ಆತನನ್ನು ಆಯ್ಕೆ ಮಾಡುವುದು ಸರಿಯಾದ ಕ್ರಮವಲ್ಲ.ಮೊದಲು ಆತನನ್ನು ದೇಶಿ ಕ್ರಿಕೆಟ್ ನಲ್ಲಿ ರನ್ ಗಳಿಸಲು ಬಿಡಬೇಕು, ನಂತರ ಮತ್ತೆ ಐಪಿಎಲ್ ಗೆ ಬಂದು ರನ್ ಗಳಿಸಬೇಕು, ಆಗಲೂ ಅವನು ಸ್ಥಿರ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು,” ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಸಲಹೆ ನೀಡಿದ್ದಾರೆ.