ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿದ್ದ ಗೀತಾ ಶಿವರಾಂರವರು ಕಾಂಗ್ರೆಸ್ ತೊರೆದು ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಗೊಂಡರು. ಚನ್ನಪಟ್ಟಣದಲ್ಲಿರುವ ಗೀತಾ ಶಿವರಾಂರವರ ನಿವಾಸಕ್ಕೆ ಭೇಟಿ ನೀಡಿದ್ದ, ಎನ್ಡಿಎ ನಾಯಕರ ನಿಯೋಗ ಜೆಡಿಎಸ್, ಬಿಜೆಪಿ ಶಾಲು ಹೊದಿಸುವ ಮೂಲಕ ಗೀತಾರವರನ್ನು ಎನ್ಡಿಎ ಒಕ್ಕೂಟಕ್ಕೆ ಬರಮಾಡಿಕೊಂಡಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ಗೀತಾ ಶಿವರಾಂರವರು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿರವರನ್ನು ಬೆಂಬಲಿಸುವ ಸಲುವಾಗಿ ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದಾರೆ. ಎನ್ಡಿಎ ಅಭ್ಯರ್ಥಿಯ ಪರವಾಗಿ ಅವರು ಕೆಲಸ ಮಾಡುತ್ತಾರೆ ಎಂದರು
ಎರಡು ಪಕ್ಷದ ಹಿರಿಯ ಮುಖಂಡರು ನನ್ನ ಮನೆಗೆ ಬಂದಿದ್ದಾರೆ. ಅವರ ಸಮ್ಮುಖದಲ್ಲಿ ನಾನು ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದೇನೆ. ಈ ಮುಂಚೆ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೆ. ಅದರಂತೆಯೇ ಇನ್ನೂಮುಂದೆ ಎನ್ಡಿಎ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ.
ನಿಖಿಲ್ ಕುಮಾರಸ್ವಾಮಿರವರ ಪರವಾಗಿ ನನ್ನ ಎಲ್ಲಾ ಬೆಂಬಲವಿದೆ ಎಂದು ಗೀತಾ ಶಿವರಾಂರವರು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ ಸುರೇಶ್ ಬಾಬು, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಟೆಗೌಡ, ರಮೇಶ್ ಗೌಡ, ಮಾಜಿ ಶಾಸಕರಾದ ಸುರೇಶಗೌಡ ಸೇರಿದಂತೆ ಅನೇಕರಿದ್ದರು.