ನವದೆಹಲಿ: ಪಾಕಿಸ್ತಾನದ (Pakistan) ಭಾರತದ ಹೈಕಮಿಷನ್ (High Commission) ಕಚೇರಿಗೆ ಮೊದಲ ಮಹಿಳಾ ಅಧಿಕಾರಿಯಾಗಿ ಐಎಫ್ಎಸ್ ಅಧಿಕಾರಿ ಗೀತಿಕಾ ಶ್ರೀವಾಸ್ತವ (Geetika Srivastava) ನೇಮಕಗೊಂಡಿದ್ದಾರೆ. ಗೀತಿಕಾ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮಿಷನರ್ ಕಚೇರಿಗೆ ನೇಮಕವಾಗಿದ್ದಾರೆ. ಶೀಘ್ರದಲ್ಲೇ ಇಸ್ಲಾಮಾಬಾದ್ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗೀತಿಕಾ ಶ್ರೀವಾಸ್ತವ ಅವರು 2005 ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ. ಅವರು ಈ ಹಿಂದೆ 2007 ರಿಂದ 2009 ರ ನಡುವೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕೋಲ್ಕತ್ತಾದ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಲ್ಲಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಹಿಂದೂ ಮಹಾಸಾಗರ ವಲಯ ವಿಭಾಗದ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಕಾರ್ಯಾಚರಣೆಗೆ ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿ 2019 ರಿಂದ ಯಾರೂ ಹೈಕಮಿಷನರ್ಗಳಿಲ್ಲ. ಈ ಹಿಂದೆಯೂ ಭಾರತೀಯ ಮಹಿಳೆಯರು ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇಷ್ಟು ಉನ್ನತ ಹುದ್ದೆಗೆ ಯಾರೂ ಹೋಗಿರಲಿಲ್ಲ ಎನ್ನಲಾಗಿದೆ.