ಜರ್ಮನಿಯ ಸೊಲಿಂಜೆನ್ ನಲ್ಲಿ ಹಬ್ಬದ ವೇಳೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 9.30ಕ್ಕೆ ಘಟನೆ ನಡೆದಿದ್ದು, ಫ್ರೋನೋಫ್ ನ ಸೆಂಟ್ರಲ್ ಸ್ಕ್ವೇರ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಜನರ ಮೇಲೆ ಚಾಕುವಿನಿಂದ ಇರಿಯುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಒಬ್ಬನೇ ವ್ಯಕ್ತಿ ಈ ದಾಳಿ ನಡೆಸಿದ್ದು, ತಕ್ಷಣವೇ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಹಾಗೂ ಇದುವರೆಗೆ ಆತನ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಸಂಭ್ರಮವನ್ನು ಆಯೋಜಿಸಿದ್ದ ಸಂಯೋಜಕರಲ್ಲೊಬ್ಬರಾದ ಫಿಲಿಪ್ ಮುಲ್ಲರ್, ಸಭೆಯನ್ನುದ್ದೇಶಿಸಿ ಮಾತನಾಡಿ, “ಸಮಾಧಾನದಿಂದ ಇರಿ; ದಯವಿಟ್ಟು ನಿಮ್ಮ ದೃಷ್ಟಿ ತೆರೆದಿರಲಿ; ಏಕೆಂದರೆ ದಾಳಿಕೋರನನ್ನು ದುರಾದೃಷ್ಟವಶಾತ್ ಇನ್ನೂ ಹಿಡಿದಿಲ್ಲ” ಎಂದು ಹೇಳಿದರು. ಹಲವು ಮಂದಿಗೆ ಒಬ್ಬ ಚಾಕುಧಾರಿ ನಡೆಸಿದ ದಾಳಿಯಲ್ಲಿ ಗಾಯಗಳಾಗಿವೆ ಎಂದು ವಿವರಿಸಿದರು.
ಒಂದು ಹೆಲಿಕಾಪ್ಟರ್ ಮತ್ತು ಹಲವು ಪೊಲೀಸ್ ಮತ್ತು ತುರ್ತು ವಾಹನಗಳು ತುರ್ತು ಸ್ಪಂದನಾ ಕಾರ್ಯಾಚರಣೆ ನಡೆಸಿವೆ. ಈ ಭಾಗದ ಪ್ರಮುಖ ರಸ್ತೆಗಳನ್ನು ಸುತ್ತುವರಿಯಲಾಗಿದೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.