ನೀವು ಶುಂಠಿ ಚಹಾ ಪ್ರಿಯರಾಗಿದ್ದರೆ, ಅಡುಗೆಯಲ್ಲಿ ಶುಂಠಿಯನ್ನು ಯಥೇಚ್ಛವಾಗಿ ಬಳಸುತ್ತಿದ್ದರೆ ವೈದ್ಯರ ಬಳಿ ಹೋಗುವ ಪ್ರಮೇಯ ಬರುವುದಿಲ್ಲ. ಏಕೆಂದರೆ ನಾವು ದಿನನಿತ್ಯ ಬಳಸುವ ಶುಂಠಿಯಿಂದ ಒಂದಲ್ಲ, ಎರಡಲ್ಲ, ನೂರಾರು ಪ್ರಯೋಜನಗಳಿವೆ. ಹೌದು, ಶುಂಠಿಯಲ್ಲಿರುವ ಔಷಧೀಯ ಗುಣಗಳು ಕ್ಯಾನ್ಸರ್’ನಂತಹ ಹೆಮ್ಮಾರಿಯನ್ನೂ ಹೊಡೆದೋಡಿಸುವ ಶಕ್ತಿ ಹೊಂದಿದೆ.
ಅಷ್ಟೇ ಅಲ್ಲ, ಶುಂಠಿ ದೈಹಿಕ ಆರೋಗ್ಯ ಕಾಪಾಡುವುದಲ್ಲದೆ ಚರ್ಮ, ಕೂದಲಿನ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಹಾಗಾದರೆ ಬನ್ನಿ ಶುಂಠಿಯ ಪ್ರಯೋಜನಗಳನ್ನು ತಿಳಿಯೋಣ.
ಶುಂಠಿಯನ್ನು ಹೆಚ್ಚಾಗಿ ಚೀನಾ ಮತ್ತು ಭಾರತದಲ್ಲಿ ಕಾಣಬಹುದಾದರೂ, ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ಆಯುರ್ವೇದದಲ್ಲಿಯೂ ಇದನ್ನು ಔಷಧಿಯಾಗಿ ಬಳಸುತ್ತಾರೆ. 4000 ವರ್ಷಗಳಿಂದ ಮಸಾಲೆ ಪದಾರ್ಥವಾಗಿ ಶುಂಠಿಯನ್ನು ಬಳಸಲಾಗುತ್ತಿದೆ. ಆದರೆ ಇದರ ಔಷಧೀಯ ಗುಣಗಳನ್ನು ಸುಮಾರು 2000 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. ವಾಕರಿಕೆ, ಹಸಿವು ಕಡಿಮೆಯಾಗುವುದು ಮತ್ತು ವಾಂತಿ ಬಂತೆಂದರೆ ಬಹುತೇಕರು ಬಳಸುವುದು ಶುಂಠಿಯನ್ನೇ. ಕ್ಯಾನ್ಸರ್ ಚಿಕಿತ್ಸೆ, ಉದರಶೂಲೆ, ಹೊಟ್ಟೆ ಉಬ್ಬರ, ವಾಯು, ಮಾರ್ನಿಂಗ್ ಸಿಕ್’ನೆಸ್’ನಿಂದ ಉಂಟಾಗುವ ವಾಕರಿಕೆಗೆ ಔಷಧಿಯಾಗಿ ಶುಂಠಿಯನ್ನು ಬಳಸುವುದು ರೂಢಿ. ಕೆಲವರು ಹಸಿ ಶುಂಠಿಯನ್ನು ಬಳಸಿದರೆ, ಇನ್ನು ಕೆಲವರು ಒಣಗಿಸಿ ಪುಡಿ ಮಾಡಿ ಕೆಲವು ಖಾದ್ಯಗಳಿಗೆ ಸೇರಿಸಿ ಬಳಸುತ್ತಾರೆ. ಈಗಲೂ ಹಳ್ಳಿ ಮನೆಗಳಲ್ಲಿ ಶೀತ ಮತ್ತು ಜ್ವರ ಬಂದರೆ ಶುಂಠಿ ಚಹಾ ಕುಡಿಯುವುದು ಮಾಮೂಲು. ಇತ್ತೀಚಿನ ದಿನಗಳಲ್ಲಿಇದನ್ನು ಪಾಶ್ಚಾತ್ಯರೂ ತಮ್ಮ ಅಡುಗೆಯಲ್ಲಿ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಜಿಂಜರ್ ಅಲೆ, ಜಿಂಜರ್ ಸ್ನ್ಯಾಪ್ಸ್, ಜಿಂಜರ್ ಬ್ರೆಡ್, ಜಿಂಜರ್ ಬಿಸ್ಕತ್ತು ಮತ್ತು ಜಿಂಜರ್ ಕೇಕ್ ನಂತಹ ಸಿಹಿ ಆಹಾರಗಳಲ್ಲಿಯೂ ಬಳಸಲಾಗುತ್ತಿದೆ.
ಶುಂಠಿಯಲ್ಲಿ ಆಂಟಿಹಿಸ್ಟಾಮೈನ್ ಗುಣಗಳು ಇರುವುದರಿಂದ ಅಲರ್ಜಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಶತ ಶತಮಾನಗಳಿಂದ ಇದನ್ನು ಶೀತ ಮತ್ತು ಜ್ವರಕ್ಕೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಒಂದು ಟೀ ಚಮಚ ಶುಂಠಿ ರಸ ಮತ್ತು ಜೇನುತುಪ್ಪವು ಶೀತಕ್ಕೆ ಸಂಬಂಧಿಸಿದ ನಿರಂತರ ಕೆಮ್ಮು ಮತ್ತು ಗಂಟಲಿನ ನೋವು ನಿವಾರಣೆಗೆ ಪರಿಣಾಮಕಾರಿ ಔಷಧಿಯಾಗಿದೆ. ಗಂಟಲು ಮತ್ತು ಮೂಗು ಕಟ್ಟಿಕೊಂಡಿದ್ದರೆ ತೊಡೆದುಹಾಕಲು ಶುಂಠಿ ಚಹಾ ಸಹಾಯ ಮಾಡುತ್ತದೆ. ತಾಜಾ ಶುಂಠಿ ರಸ ಮತ್ತು ಮೆಂತ್ಯದ ಮಿಶ್ರಣವು ಅಸ್ತಮಾವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಜ್ವರ ಅಥವಾ ಫುಡ್ ಪಾಯಿಸನ್’ಗೆ ಚಿಕಿತ್ಸೆ ನೀಡಲು ಶುಂಠಿ ಸಹಕಾರಿಯಾಗಿದೆ.
ಹಲವಾರು ಅಧ್ಯಯನಗಳು ಶ್ವಾಸಕೋಶ, ಅಂಡಾಶಯ, ಪ್ರಾಸ್ಟೇಟ್, ಸ್ತನ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಶುಂಠಿ ಸಹಾಯ ಮಾಡುತ್ತದೆ ಎಂದು ಹೇಳಿವೆ. ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಶುಂಠಿ ಪುಡಿ ಅಂಡಾಶಯದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಕಂಡುಹಿಡಿದಿದ್ದಾರೆ. ಇದು ಕ್ಯಾನ್ಸರ್ ಪ್ರಚೋದಿಸುವ ಕೋಶಗಳನ್ನು ಕೊಲ್ಲುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್’ಗೆ ಚಿಕಿತ್ಸೆ ನೀಡುತ್ತದೆ.