ಶುಂಠಿಯು ಅದ್ಭುತ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ಹಾಗೂ ಮನೆ ಮದ್ದು ತಯಾರಿಕೆಯಲ್ಲಿ ಶುಂಠಿಯನ್ನು ಪ್ರಮುಖ ವಸ್ತುವನ್ನಾಗಿ ಬಳಸಲಾಗುವುದು. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಬಹು ಬೇಗ ನಿವಾರಣೆ ಮಾಡುವುದು. ಭಾರತೀಯ ಅಡುಗೆ ಪದ್ಧತಿಯಲ್ಲಿ ಶುಂಠಿಯನ್ನು ವಿಶೇಷವಾಗಿ ಬಳಸಲಾಗುವುದು.
ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವುದು ಅದರ ವಿಶೇಷವಾದ ಗುಣ ಎನ್ನಬಹುದು. ಶುಂಠಿಯನ್ನು ನಿಯಮಿತವಾಗಿ ಮುಂಜಾನೆಯ ಆಹಾರದಲ್ಲಿ ಬಳಸುವುದರಿಂದ ದೇಹವು ಹೆಚ್ಚು ಆರೋಗ್ಯಕರವಾಗಿ ಇರುತ್ತದೆ. ಅಲ್ಲದೆ ಹೊರ ಪರಿಸರದಲ್ಲಿ ಇರುವ ವೈರಸ್ ಹಾಗೂ ಸೋಂಕುಗಳ ದಾಳಿಯಿಂದಲೂ ದೇಹವನ್ನು ರಕ್ಷಿಸುವುದು. ಹಾಗಾದರೆ ಅದು ಹೇಗೆ? ಎನ್ನುವ ಕುತೂಹಲ ಇದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.
ಶುಂಠಿ ಕಾಫಿ
ಮುಂಜಾನೆಯ ಪ್ರಾರಂಭದಲ್ಲಿ ನೀವು ಶುಂಠಿ ಮಿಶ್ರಿತ ಕಾಫಿಯನ್ನು ಸೇವಿಸಬಹುದು. ಶುಂಠಿಯನ್ನು ಹೊಂದಿರುವ ಒಂದು ಕಪ್ ಕಾಫಿ ನಿಮ್ಮ ದೇಹವನ್ನು ಚೈತನ್ಯ ಶೀಲವಾಗಿರಿಸುವುದರ ಜೊತೆಗೆ ಆರೋಗ್ಯ ವೃದ್ಧಿ ಮಾಡುವುದು. ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಶುಂಠಿಯನ್ನು ಗಣನೀಯವಾಗಿ ಸೇವಿಸುವುದು ಅದ್ಭುತವಾದ ಆಯ್ಕೆಯಾಗುವುದು. ಒಂದು ಕಪ್ ಕಾಫಿಗೆ ಅರ್ಥ ಟೀ ಚಮಚ ದಿಂದ ಒಂದು ಟೀ ಚಮಚ ಶುಂಠಿ ರಸ ಅಥವಾ ಪುಡಿಯನ್ನು ಸೇರಿಸಿ ಕುಡಿಯಬಹುದು. ಇದು ನಿಮಗೆ ರುಚಿಯಲ್ಲಿ ಅಷ್ಟು ಹಿತ ಎನಿಸದೆ ಇರಬಹುದು ಆದರೆ ಆರೋಗ್ಯದ ದೃಷ್ಟಿಯಿಂದ ಅದ್ಭುತವಾದ ಆಯ್ಕೆಯಾಗುವುದು.
ಶುಂಠಿ ಚಹಾ
ಚಳಿಗಾಲ ಹಾಗೂ ಮಳೆಗಾಲದ ಚಳಿಗೆ ಶುಂಠಿ ಚಹಾ ಅತ್ಯುತ್ತಮವಾದುದ್ದು. ಇದು ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಚಳಿಗಾಲದಲ್ಲಿ ಉಂಟಾಗುವ ಜ್ವರ, ನೆಗಡಿ, ತಲೆನೋವು, ಮೂಗು ಸೋರುವುದು, ವಾಕರಿಕೆ ಸಮಸ್ಯೆ, ಜೀರ್ಣಕ್ರಿಯೆಯ ತೊಂದರೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಅಂಗಡಿಯಲ್ಲಿ ದೊರೆಯುವ ಶುಂಠಿ ಮಿಶ್ರಿತ ಚಹಾ ಪುಡಿ ಬಳಸಬಹುದು. ಇಲ್ಲದೆ ಇದ್ದರೆ ಒಂದು ಟೀ ಚಮಚದಷ್ಟು ತಾಜಾ ಶುಂಠಿಯನ್ನು ತುರಿದು, 10 ನಿಮಿಷಗಳ ಕಾಲ ಒಂದು ಕಪ್ ನೀರಿನಲ್ಲಿ ಕುದಿಸಿ. ನಂತರ ಟೀ ಪುಡಿ ಸೇರಿಸಿ ಚಹಾ ತಯಾರಿಸಿ. ರುಚಿಗೆ ಸಕ್ಕರೆಯನ್ನು ಸೇರಿಸಬಹುದು. ಈ ಸಂಯೋಜನೆಯು ಅದ್ಭುತವಾದ ಪರಿಮಳ ಮತ್ತು ರುಚಿಯೊಂದಿಗೆ ಆರೋಗ್ಯವನ್ನು ಕಾಪಾಡುವುದು.
ಶುಂಠಿ ಜಾಮ್
ಮುಂಜಾನೆ ಟೀಯೊಂದಿಗೆ ಬಿಸ್ಕತ್ ಸವಿಯುವ ಹವ್ಯಾಸ ಇದ್ದರೆ ಶುಂಠಿ ಮಿಶ್ರಿತ ಜಾಮ್ ಅನ್ನು ಬಿಸ್ಕತ್ಗೆ ಸೇರಿಸಿ ಸವಿಯಿರಿ. ವಿವಿಧ ಹಣ್ಣುಗಳ ಜಾಮ್ನೊಂದಿಗೆ ಶುಂಠಿಯನ್ನು ಸೇರಿಸಿ ಜಾಮ್ ತಯಾರಿಸಬಹುದು. ಅದು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗುವುದು. ಅದನ್ನು ನೀವೇ ಮನೆಯಲ್ಲಿ ಜಾಮ್ನೊಂದಿಗೆ ಮಿಶ್ರಗೊಳಿಸಬಹುದು. ಶುಂಠಿ ಮಿಶ್ರಿತ ಜಾಮ್ ಅನ್ನು ಬಿಸ್ಕತ್ನ ಜೊತೆಗೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ವಿಟಮಿನ್ ಸಿ ದೊರೆಯುವುದು. ಈ ಮೂಲಕ ನೀವು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು. ಜೊತೆಗೆ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುವುದು.
ಸಾವಯವ ಶುಂಠಿ ಸಿರಪ್
ಸಾವಯವ ಶುಂಠಿ ಸಿರಪ್ ಅನ್ನು ಮುಂಜಾನೆಯ ಆಹಾರವಾದ ದೋಸೆ, ಓಟ್ ಮೀಲ್, ಕೇಕ್ಗಳೊಂದಿಗೆ ಸೇರಿಸಿ ಸೇವಿಸಬಹುದು. 250 ಗ್ರಾಂ ನಷ್ಟು ಶುಂಠಿಯನ್ನು ತೆಗೆದುಕೊಳ್ಳಬೇಕು. ನಂತರ ಅದರ ಸಿಪ್ಪೆಯನ್ನು ತೆಗೆದು, ತೆಳುವಾಗಿ ಹೆಚ್ಚಿಕೊಳ್ಳಿ. ಬಳಿಕ 1 ಕಪ್ ಸಕ್ಕರೆ ಮತ್ತು ಒಂದು ಕಪ್ ನೀರನ್ನು ಸೇರಿಸಿ ಮಿಶ್ರಗೊಳಿಸಿ. ನಂತರ ಮಿಶ್ರಣವನ್ನು 30 ನಿಮಿಷಗಳ ಕಾಲ ಕುದಿಸಬೇಕು. ಮೃದುವಾಗಿ ಬೆಂದ ಬಳಿಕ ಜರಡಿ ಹಿಡಿದು, ಶುಂಠಿ ಸಿರಪ್ ಅನ್ನು ಬೇರ್ಪಡಿಸಿಕೊಳ್ಳಬೇಕು.
ಶುಂಠಿ ಗ್ರಾನೋಲಾ
ನಿತ್ಯದ ಉಪಹಾರದಲ್ಲಿ ನೀವು ಶುಂಠಿಯನ್ನು ಸೇರಿಸಿಕೊಳ್ಳುವುದು ಅತ್ಯುತ್ತಮವಾದ ಆಯ್ಕೆಯಾಗುವುದು. ಸಾಕಷ್ಟು ಜನರು ಮುಂಜಾನೆಯ ಉಪಹಾರಕ್ಕೆ ಕುರುಕಲಾದ ಗ್ರಾನೋಲವನ್ನು ಬಳಸುತ್ತಾರೆ. ನೀವು ನಿಮ್ಮ ಗ್ರಾನೋಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು ಬಯಸುವುದಾದರೆ ಹೀಗೆ ಮಾಡಿ… ಒಂದು ಇಂಚಿನ ಶುಂಠಿಯನ್ನು ತುರಿದು ಜೇನುತುಪ್ಪ ಅಥವಾ ತೆಂಗಿನೆಣ್ಣೆಯ ಮಿಶ್ರಮಾಡಿ. ನಂತರ ಅದನ್ನು ನಿಮ್ಮ ಗ್ರೊನೊಲಾ ಬೌಲ್ಗೆ ಚಿಮುಕಿಸಿಕೊಳ್ಳಿ. ಗ್ರೊನೊಲಾದಲ್ಲಿ ಸಾಮಾನ್ಯವಾಗಿ 11 ಬಗೆಯ ಆರೋಗ್ಯಕರ ಆಹಾರ ಪದಾರ್ಥಗಳ ಮಿಶ್ರಣವಿರುತ್ತದೆ. ಅವುಗಳೊಂದಿಗೆ ಶುಂಠಿಯ ರಸವು ಮಿಶ್ರಗೊಂಡರೆ ಅದರ ಶಕ್ತಿಯು ದ್ವಿಗುಣವಾಗುವುದು. ಜೊತೆಗೆ ಆರೋಗ್ಯಕರ ಆಹಾರದೊಂದಿಗೆ ದಿನದ ಆರಂಭವಾಗುತ್ತದೆ.
ಸ್ಮೂಥಿಗೆ ಶುಂಠಿ ರಸವನ್ನು ಸೇರಿಸಿ
ಕೆಲವರು ಮುಂಜಾನೆ ಹಣ್ಣುಗಳ ಸ್ಮೂಥಿಯನ್ನು ಸವಿಯುತ್ತಾರೆ. ಸ್ಮೂತಿಯೊಂದಿಗೆ ಶುಂಠಿ ರಸವನ್ನು ಸೇರಿಸಿದರೆ ಸ್ಮೂತಿಯು ಹೆಚ್ಚು ಆರೋಗ್ಯಕರವಾಗಿರುತ್ತದೆ. ಯಾವುದೇ ಹಣ್ಣುಗಳ ಸ್ಮೂಥಿಯೊಂದಿಗೆ ಶುಂಠಿಯ ರಸವನ್ನು ಸೇರಿಸಿ ಸವಿಯಬಹುದು. ನಿತ್ಯವೂ ಶುಂಠಿ ಮಿಶ್ರಿತ ಸ್ಮೂಥಿಯನ್ನು ಸವಿದರೆ ನೋವು, ಮುಟ್ಟಿನ ಸೆಳೆತ, ಜೀರ್ಣಕ್ರಿಯೆಯ ಸಮಸ್ಯೆ ಸೆರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಇದನ್ನು ವ್ಯಾಯಾಮ ಪೂರ್ವದಲ್ಲಿ ಪ್ರೋಟೀನ್ ಶೇಕ್ ಆಗಿಯೂ ಸವಿಯಬಹುದು.
ಸೂಪರ್ ಫುಡ್ಗಳ ರೂಪದಲ್ಲಿ ಸವಿಯಬಹುದು
ಶುಂಠಿಯ ರಸವನ್ನು ಅಂಟಿನ ಉಂಡೆ, ಬರ್ಫಿ ಸೇರಿದಂತೆ ಇನ್ನಿತರ ಆಹಾರಗಳಲ್ಲಿ ಬಳಸಬಹುದು. ಆಗ ಸೂಪರ್ ಫುಡ್ಗಳು ಶುಂಠಿಯ ರಸದಿಂದ ಹೆಚ್ಚು ಆರೋಗ್ಯಕರವಾಗಿರುತ್ತದೆ. ಶುಂಠಿಯ ಮಿಶ್ರಿತ ಉಪಹಾರ ಸವಿಯಲು ಬಯಸದವರು ಶುಂಠಿ ಮಿಶ್ರಿತ ಸೂಪರ್ ಫುಡ್ ಅನ್ನು ಮುಂಜಾನೆ ಸವಿಯಬಹುದು. ಇದು ಸಹ ನಿಮ್ಮ ದೇಹಕ್ಕೆ ಆರೋಗ್ಯ ಹಾಗೂ ಚೈತನ್ಯವನ್ನು ನೀಡುವುದು.