ಚಾಮರಾಜನಗರ: ಋತುಮಾನದ ಅವಧಿಯಲ್ಲಿ ಹೆಣ್ಣು ಮಕ್ಕಳು ಮೈತ್ರಿ ಮುಟ್ಟಿನ ಕಪ್ ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ರಾಷ್ಟೀಯ ಬಾಲ ಸ್ವಾಸ್ಥ್ಯ, ರಾಷ್ಟೀಯ ಕಿಶೋರ ಸ್ವಾಸ್ಥ್ಯ, ಶುಚಿ ಕರ್ನಾಟಕ ಉಪ ನಿರ್ದೇಶಕಿ ಡಾ.ವೀಣಾ ಸಲಹೆ ನೀಡಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮೈತ್ರಿ ಮುಟ್ಟಿನ ಕಪ್ ಬಳಕೆಯ ಅರಿವು ಹಾಗೂ ವಿತರಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಋತುಮಾನದ ಕಪ್ ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಪರಿಸರದ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಋತುಮಾನದ ಕಪ್ಗಳನ್ನು ೧೦ ವರ್ಷಗಳ ಕಾಲ ಮರುಬಳಕೆ ಮಾಡಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಆರೋಗ್ಯಯುತವಾದ ಕಪ್ಗಳನ್ನು ಬಳಕೆ ಮಾಡುವುದು ಒಳಿತು ಎಂದರು.
ಸ್ಯಾನಿಟರಿ ಪ್ಯಾಡ್ಗಳಿಗೆ ಬಳಸಿರುವ ರಾಸಾಯನಿಕ ಅಂಶಗಳು ಆರೋಗ್ಯಕ್ಕೆ ಹಾನಿಕಾರವಾಗಿದೆ. ಋತುಮಾನದ ಕಪ್ಗಳು ಮಣ್ಣಿನಲ್ಲಿ ಕೊಳೆಯುವ ಗುಣ ಹೊಂದಿರುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಒಂದು ವರ್ಷದಲ್ಲಿ ಸರಿ ಸುಮಾರು ೧.೫ ಬಿಲಿಯನ್ ಸ್ಯಾನಿಟರಿ ಪ್ಯಾಡ್ಗಳು ಪರಿಸರದಲ್ಲಿ ಬೆರೆತು ಹೋಗುತ್ತಿವೆ. ಇದರಿಂದ ಮಣ್ಣು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ಚಾಮರಾಜನಗರ ಸರ್ಕಾರಿ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮಹೇಶ್ವರಿ ಮಾತನಾಡಿ, ಮೈತ್ರಿ ಮುಟ್ಟಿನ ಕಪ್ ವೈಜ್ಞಾನಿಕ ನಿರ್ವಹಣೆಯ ಒಂದು ಉಪಯುಕ್ತ ಸಾಧನವಾಗಿದೆ. ಮುಟ್ಟಿನ ಸಮಯದಲ್ಲಿನ ನೈರ್ಮಲ್ಯ ಕಾಪಾಡಲು ವೈದ್ಯಕೀಯವಾಗಿ ಬಳಸಬಹುದಾದ ಹಾಗೂ ಸ್ಯಾನಿಟರಿ ಪ್ಯಾಡ್ಗಳ ಪರ್ಯಾಯ ಸಾಧನವಾಗಿದೆ. ಪ್ರಸ್ತುತ ಪರಿಸರ ಹಾಗೂ ಆಹಾರದ ಬದಲಾವಣೆಯಿಂದ ೮ನೇ ತರಗತಿಗೆ ಬರುವಷ್ಟರಲ್ಲೇ ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಸಂಬಂಧ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಮೊದಲು ಹೆಣ್ಣು ಮಕ್ಕಳು ಬಟ್ಟೆಗಳನ್ನು ಬಳಸುತ್ತಿದ್ದರು. ಇದು ಸುರಕ್ಷಿತವಾಗಿರಲಿಲ್ಲ. ಅದು ಅನೇಕ ರೋಗಗಳು ಬರಲು ಕಾರಣವಾಗುತ್ತಿತ್ತು. ಜೊತೆಗೆ ಸ್ಯಾನಿಟರಿ ಪ್ಯಾಡ್ಗಳ ಬಳಕೆಯೂ ಸಹ ಪರಿಸರಕ್ಕೆ ಹಾನಿಯಾಗುತ್ತಿತ್ತು. ಆದರೆ, ಮೈತ್ರಿ ಮುಟ್ಟಿನ ಕಪ್ ಹೆಚ್ಚು ಉಪಯುಕ್ತವಾಗಿದೆ ಎಂದರು.
ಹಿಂದಿನ ಕಾಲದಲ್ಲಿ ಮೂರು ದಿನಗಳ ಕಾಲ ಹೊರಗಡೆ ಕೂರಿಸುವುದು, ಬಟ್ಟೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಮಡಿವಂತಿಕೆಯಲ್ಲಿ ತುಂಬಾ ಬದಲಾವಣೆಗಳಾಗಿದೆ. ಹಾಸ್ಟೆಲ್ಗಳಲ್ಲಿ ಪ್ಯಾಡ್ಗಳನ್ನು ಸುಡಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಸ್ವಚ್ಛತೆ ಕಾಪಾಡಲು ಸಾಧ್ಯ. ಶಾಲಾ, ಕಾಲೇಜುಗಳಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈತ್ರಿ ಮುಟ್ಟಿನ ಕಪ್ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಕುದರತ್, ಉಪನ್ಯಾಸಕಿ ಪ್ರೇಮ ಸೇರಿದಂತೆ ಇತರರಿದ್ದರು.
ವರದಿ: ಪ್ರಮೋದ್. ಆರ್ ಚಾಮರಾಜನಗರ