ಮಂಡ್ಯ :- ಸಮಾಜ ಸೇವೆ ಜೊತೆಗೆ ರಾಜಕೀಯ ಶಕ್ತಿಯನ್ನು ನೀಡಿದರೆ ನಿಮ್ಮ ಮನೆಯ ಸೇವಕನಾಗಿ ದುಡಿಯುತ್ತೇನೆ ಎಂದು ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಹೇಳಿದರು. ಮದ್ದೂರು ವಿಧಾನ ಸಭಾ ಕ್ಷೇತ್ರದ ಸೋಮನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ನಿಡಘಟ್ಟ, ಕೊಂಗಬೋರನದೊಡ್ಡಿ, ಮಾದಾಪುರದದೊಡ್ಡಿ, ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ತೈಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆವ ಸರ್ಕಾರ ಎಂದರೆ ಅದು ಬಿಜೆಪಿ ಪಕ್ಷ ಮಾತ್ರ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳು ಮತ್ತು ಜೆಡಿಎಸ್ ನ ಪಂಚರತ್ನ ರಥ ಯಾತ್ರೆ ಎರಡು ಮೇ.10ರಿಂದ ಮೂಲೆ ಸೇರುತ್ತವೆ. ಮೇ.13 ರಿಂದ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಲಿದ್ದು, ಹೀಗಾಗಿ ಕ್ಷೇತ್ರದ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಕಳೆದ 16 ವರ್ಷಗಳಿಂದ ಶ್ರೀನಿಧಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯೇತರ ಸಾಮಾಗ್ರಿಗಳು, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಉದ್ಯೋಗ ಮೇಳ, ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ಆರೋಗ್ಯ ಕಾಪಾಡುವಲ್ಲಿಯೂ ಶಕ್ತಿ ಮೀರಿ ಶ್ರಮಿಸಿದ್ದೇನೆ. ಹೀಗಾಗಿ ನನ್ನ ಸಮಾಜ ಸೇವೆ ಜೊತೆಗೆ ರಾಜಕೀಯವಾಗಿ ಶಕ್ತಿ ನೀಡಬೇಕೆಂದರು.
ಮದ್ದೂರು ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಧಿಕಾರವನ್ನು ನೋಡಿದ್ದಿರಿ. ಮೋರಿ, ರಸ್ತೆ ಹಾಗೂ ಬಿಲ್ಡಿಂಗ್ ಗಳನ್ನು ಮಾಡಿ ಕಮೀಷನ್ ಪಡೆಯೋಕಷ್ಟೆ ಶಾಸಕರಾಗಿ ಕೆಲಸ ಮಾಡಿದ್ದಾರೆ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗೊಂದು ಅವಕಾಶ ನೀಡಿ ನಿಮ್ಮ ಸೇವಕನಾಗಿ ಜನರ ಮಧ್ಯೆ ಇದ್ದುಕೊಂಡೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮನವಿ ಮಾಡಿದರು. ಇದೇ ವೇಳೆ ಗ್ರಾ.ಪಂ ಸದಸ್ಯೆ ಸರಸ್ವತಿ, ಕೆ.ಕೋಡಿಹಳ್ಳಿ ಹಾ.ಉ.ಸ.ಸಂ ಅಧ್ಯಕ್ಷ ಅನಿಲ್ ಕುಮಾರ್ ಮುಖಂಡರಾದ ಸತೀಶ್, ಪ್ರದೀಪ್, ಗಿರೀಶ್, ಸಂಜೀವೆಗೌಡ, ಧನಂಜಯ್, ರಾಜು, ಪುಟ್ಟಸ್ವಾಮಿ, ರಾಜಣ್ಣ, ಮಹೇಶ್, ಹೊನ್ನೇಗೌಡ, ಮಂಜುಳ, ಶಾಲಿನಿ, ಚಿಕ್ಕತಾಯಮ್ಮ, ದೇವರಾಜ್, ಕೆಂಪಣ್ಣ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.