ಶಿಡ್ಲಘಟ್ಟ: ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನುಡಿದಂತೆ ನಡೆಯಬೇಕು, ಚುನಾವಣೆಗೂ ಮೊದಲು ಜನತೆಗೆ ಭರವಸೆ ಕೊಟ್ಟಂತೆ ಹತ್ತು ಕೆಜಿ ಅಕ್ಕಿ ಕೊಡಬೇಕು, ಇಲ್ಲವಾದಲ್ಲಿ ಜನತೆಯ ಬ್ಯಾಂಕ್ ಖಾತೆಗೆ ನೇರವಾಗಿ 360 ರು. ಗಳನ್ನು ಜಮೆ ಮಾಡಬೇಕು ಎಂದು ಸಂಸದ ಮುನಿಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಮಯೂರ ಸರ್ಕಲ್ ಬಳಿಯ ಬಿಜೆಪಿ ಕಚೇರಿ ಸೇವಾಸೌಧ ದಲ್ಲಿ ಸಂಕಲ್ಪ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟು ಅವರು ಮಾತನಾಡಿದರು. ಚುನಾವಣೆಗೂ ಮೊದಲು ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ, ಬದಲಿಗೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಕೊಡಬಹುದು ಹಾಗೆ ಮಾಡದೇ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ ಎಂದರು.
ಮುಕ್ತ ಮಾರುಕಟ್ಟೆಯಲ್ಲಿ ದೊರೆಯದಿದ್ದರೆ ಜನರ ಬ್ಯಾಂಕ್ ಖಾತೆಗೆ 360 ರೂ. ಗಳನ್ನು ನೇರವಾಗಿ ಜಮಾ ಮಾಡಲಿ ಎಂದು ಸಲಹೆ ಕೊಟ್ಟರು. ಚುನಾವಣೆಯ ನಂತರ ಗೆದ್ದಂತಹ ಶಾಸಕರುಗಳೇ ಕ್ಷೇತ್ರಗಳಿಂದ ನಾಪತ್ತೆ ಆಗುವಂತಹ ಈ ಸಂದರ್ಭದಲ್ಲಿ ಚುನಾವಣೆ ಸೋತರೂ ದೃತಿಗೆಡದೆ ರಾಮಚಂದ್ರಗೌಡರು ಕ್ಷೇತ್ರದಲ್ಲಿ ತಮ್ಮ ಸೇವೆ ಮುಂದುವರೆಸಿದ್ದಾರೆ ಅವರಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸೇವೆ ನಿರಂತರ….
ಶೀಕಲ್ ರಾಮಚಂದ್ರ ಗೌಡ ಮಾತನಾಡಿ ನನ್ನ ಉದ್ದೇಶ ಕೇವಲ ಚುನಾವಣೆಗೆ ಸ್ಪರ್ಧಿಸುವುದಾಗಲಿ, ಗೆಲ್ಲುವುದಾಗಲಿ ಅಷ್ಟೇ ಆಗಿಲ್ಲ. ಜನರ ಸೇವೆ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಚುನಾವಣೆ ಯಲ್ಲಿ ಸೋಲು ಗೆಲುವು ಸಾಮಾನ್ಯ, ಅದು ಸ್ವೀಕರಿಸುವಂತದ್ದು, ಆದರೆ ಜನರ ಸೇವೆ ನಿರಂತರವಾಗಿ ಮುಂದುವರೆಸುತ್ತೇನೆ ಎಂದರು. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಜಾರಿಯಲ್ಲಿದ್ದು, ಹಾಗು ಸದ್ಯ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀ ಬಾಲಾಜಿ ಟ್ರಸ್ಟ್ ನ ಅಡಿಯಲ್ಲಿ ಸಂಕಲ್ಪ ಹೆಸರಿನಲ್ಲಿ ಸರ್ಕಾರದ ಸೇವೆಗಳ ನೊಂದಣಿ ಡಿಜಿಟಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ,
ಕ್ಷೇತ್ರದ ಜನರು ತಮ್ಮ ಯಾವುದೇ ಡಿಜಿಟಲ್ ಸೇವೆಯನ್ನು ಇಲ್ಲಿ ಬಂದು ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು. ಸೇವಾ ಸೌಧ ಎಂಬುದು ಕೇವಲ ಹೆಸರು ಮಾತ್ರವಲ್ಲ, ಹೆಸರಿಗೆ ತಕ್ಕಂತೆ ಕೆಲಸ ಮಾಡುವ ಕೇಂದ್ರವಾಗಲಿದೆ, ನಗರ ಮತ್ತು ಕಸಬಾ ಹೋಬಳಿಯ ಜನರಿಗೆ ಹತ್ತಿರವಾಗುವಂತೆ ನಗರದಲ್ಲಿ ಐದು ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ, ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲ ವಾಗುವಂತೆ ಪ್ರತಿ ಹೋಬಳಿ, ಗ್ರಾ ಪಂ ಕೇಂದ್ರಗಳಲ್ಲಿ ಒಂದೊಂದು ಸೇವಾ ಕೇಂದ್ರವನ್ನು ತೆರೆಯಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ಆನಂದಗೌಡ, ಭರತ್ ಗೌಡ, ನರೇಶ್ ಮತ್ತಿತರರು ಉಪಸ್ಥಿತರಿದ್ದರು.