ಬೆಂಗಳೂರು:- ನಿಯಮ ಮೀರಿ ವಾಹನ ಚಲಾಯಿಸಿ ಅಪಘಾತ ಮಾಡಿದ ಆರು ಅಪ್ರಾಪ್ತ ವಯಸ್ಕರ ಪೋಷಕರಿಗೆ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಎಲ್ಲ ಅಪಘಾತಗಳು 2022-23 ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೂ ಮಾರಣಾಂತಿಕವಾಗಿಲ್ಲ.
ಈ ಆರು ಅಪ್ರಾಪ್ತ ವಯಸ್ಕರ ಪೋಷಕರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಅಪ್ರಾಪ್ತರಿಗೆ ತಮ್ಮ ವಾಹನಗಳನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕೋರ್ಟ್ ತಲಾ 25,000 ರೂ. ದಂಡವನ್ನು ವಿಧಿಸಿದೆ. ಪೋಷಕರು ಈಗ ಒಟ್ಟು 1.5 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ.
ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಇಂತಹ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರ ವಿರುದ್ಧ ಕೇಸ್ ಬುಕ್ ಮಾಡಿದ್ದೇವೆ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಓಡಿಸಲು ನೀಡಬೇಡಿ” ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ವಾಹನ ಮಾಲೀಕರಿಗೆ ಮನವಿ ಮಾಡಿದರು.