ಇಸ್ಲಾಮಾಬಾದ್: ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ನಿಷೇಧಿತ ಜಮಾತ್-ಉದ್-ದವಾದದ ಉಪ ಮುಖ್ಯಸ್ಥನೂ ಆಗಿದ್ದ ಮಕ್ಕಿ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಸಂಬಂಧಿಯಾಗಿದ್ದನು. ಹೃದಯಾಘಾತದಿಂದ ಮಕ್ಕಿ ಲಾಹೋರ್ನಲ್ಲಿ ಮೃತಪಟ್ಟಿದ್ದಾನೆ.
ಪಾಕಿಸ್ತಾನಿ ಟಿವಿ ಚಾನೆಲ್ ವರದಿ ಪ್ರಕಾರ, ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮಕ್ಕಿ ಲಷ್ಕರ್ನ ವಾಂಟೆಡ್ ಭಯೋತ್ಪಾದಕನಾಗಿದ್ದನು. ಈತ ಲಷ್ಕರ್ ನಾಯಕ ಹಫೀಜ್ ಸಯೀದ್ ನ ಸೋದರ ಮಾವ ಕೂಡ ಆಗಿದ್ದ. ಮಾಧ್ಯಮ ವರದಿಗಳ ಪ್ರಕಾರ, ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಲಾಹೋರ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
2019 ಮೇನಲ್ಲಿ ಮಕ್ಕಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಇದಾದ ನಂತರ ಆತನನ್ನು ಲಾಹೋರ್ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. 2020ರಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಭಯೋತ್ಪಾದಕ ಹಣಕಾಸುಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಿತು ಮತ್ತು ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜನವರಿ 2023ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಕ್ಕಿಯನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿತು. ಇದರ ಅಡಿಯಲ್ಲಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಯಿತು. ಪ್ರಯಾಣ ಮತ್ತು ಶಸ್ತ್ರಾಸ್ತ್ರ ನಿರ್ಬಂಧಗಳನ್ನು ವಿಧಿಸಲಾಯಿತು.