ಕೆಲವರು ಏನೆಲ್ಲಾ ಕೈಸಾಲ, ಬ್ಯಾಂಕ್ ಸಾಲ ಮಾಡಿಕೊಂಡು ಉದ್ಯಮ, ವಹಿವಾಟಿಗೆ ಮುಂದಾಗುತ್ತಾರೆ. ವ್ಯವಹಾರದಲ್ಲಿ ನಷ್ಟಗೊಂಡು ಮುಳುಗಡೆಯಾಗುತ್ತಲೇ ದಿಕ್ಕೇ ತೋಚದೆ ಸಾವಿನ ದಾರಿ ಹಿಡಿಯುತ್ತಾರೆ. ಇವರೂ ಕೂಡ ಹಾಗೆಯೇ. ಮೈಸೂರಿನಲ್ಲಿ ಉದ್ಯಮ ಮಾಡಿಕೊಂಡಿದ್ದವರು. ಸಾಲ ಮಾಡಿ ನಷ್ಟಗೊಳ್ಳುತ್ತಲೇ ಮಕ್ಕಳ ಜೊತೆಗೆ ಪ್ರವಾಸಕ್ಕೆಂದು ಬಂದು ತನ್ನಿಡೀ ಕುಟುಂಬದ ಜೊತೆಗೆ ಸಾವಿನ ದಾರಿ ಹಿಡಿದಿದ್ದಾರೆ.
ಆ ಮಕ್ಕಳು ಏನು ಪಾಪ ಮಾಡಿದ್ದವೋ ಏನೋ.. ಹಾಲುಗಲ್ಲದ ಕಂದಮ್ಮಗಳು.. ಮೊನ್ನೆಯಷ್ಟೆ ಶಾಲೆಗೆ ರಜೆ ಪಡೆದು ಟೂರ್ ಮೂಡಿನಲ್ಲಿದ್ದರು. ನೋಡಲು ಅಕ್ಕ ತಂಗಿಯರಂತೆ ಕಂಡರೂ, ಅವಳಿ ಹೆಣ್ಮಕ್ಕಳು. ಆದರೆ ತಂದೆ ಮಾಡಿದ ಸಾಲದ ವಹಿವಾಟಿನ ಕಾರಣವೋ ಗೊತ್ತ. ಮುಗ್ಧ ಮಕ್ಕಳು ಮತ್ತು ತಾಯಿ ತಂದೆಯ ಜೊತೆ ಮಸಣದ ದಾರಿ ಹಿಡಿದಿದ್ದಾರೆ. ಹೌದು.. ಮಕ್ಕಳೊಂದಿಗೆ ರಜೆಯ ನಿಮಿತ್ತ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದ ಮೈಸೂರಿನ ಕುಟುಂಬ ಹೊಟೇಲ್ ಕೊಠಡಿಯಲ್ಲೇ ಸಾವಿನ ದಾರಿ ಹಿಡಿದಿದೆ.
ಮಂಗಳೂರು ನಗರದ ಕೆಎಸ್ ರಾವ್ ರಸ್ತೆಯ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದಿದ್ದ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ, ಮೈಸೂರಿನ ವಿಜಯನಗರದ ವಾಣಿ ವಿಲಾಸ ಬಡಾವಣೆಯ ದೇವೇಂದ್ರ ಮತ್ತು ನಿರ್ಮಲಾ ದಂಪತಿ ಮತ್ತವರ ಅವಳಿ ಮಕ್ಕಳಾದ ಚೈತ್ರಾ ಮತ್ತು ಚೈತನ್ಯ ಸಾವನ್ನಪ್ಪಿರುವುದು ಕಂಡುಬಂದಿದೆ. ದಂಪತಿಗೆ ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕೊರಗಿನ ಬಳಿಕ ಹತ್ತು ಲಕ್ಷ ಖರ್ಚು ಮಾಡಿ ಮಕ್ಕಳು ಆಗಿದ್ದುವಂತೆ. ಇತ್ತೀಚೆಗಷ್ಟೇ ಮಕ್ಕಳ ಬರ್ತ್ ಡೇ ಪಾರ್ಟಿಯನ್ನೂ ಅದ್ದೂರಿಯಾಗೇ ಮಾಡಿದ್ದರಂತೆ. ಆದರೆ ಈಗ ದಿಢೀರ್ ಸಾವು ಆಗಿರುವುದು ಕುಟುಂಬವನ್ನು ಆತಂಕಕ್ಕೆ ನೂಕಿದೆ.
ದೇವೇಂದ್ರ ನೇಣು ಬಿಗಿದು ಸಾವಿಗೆ ಶರಣಾಗಿದ್ದರೆ, ಪತ್ನಿ ಮತ್ತು ಮಕ್ಕಳು ಬೆಡ್ ನಲ್ಲಿ ಮಲಗಿರುವ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ, ಮಕ್ಕಳ ಶವ ಕೊಳೆತು ವಾಸನೆ ಬಂದಿದ್ದು ಮೊನ್ನೆ ರಾತ್ರಿಯೇ ಸತ್ತಿರುವ ಶಂಕೆಯಿದೆ. ದೇವೇಂದ್ರ ಮೈಸೂರಿನ ವಿಜಯನಗರದಲ್ಲಿ ಲೇತ್ ಫ್ಯಾಕ್ಟರಿ ವ್ಯವಹಾರ ನಡೆಸುತ್ತಿದ್ದರು. ಈ ಕಾರಣಕ್ಕೆ ಬ್ಯಾಂಕಿನಿಂದ ಮತ್ತು ಸಾಕಷ್ಟು ಕೈಸಾಲವನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ. ಕೊಠಡಿಯಲ್ಲಿ ಸಿಕ್ಕಿರುವ ಡೆತ್ ನೋಟ್ ನಲ್ಲಿ ಸಾವಿಗೆ ತನ್ನ ಸಾಲಬಾಧೆಯೇ ಕಾರಣ ಎಂದು ದೇವೇಂದ್ರ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಸಾಲದಿಂದ ಕಿರುಕುಳ ಅಭವಿಸುತ್ತಿರುವ ಬಗ್ಗೆಯೂ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೊನ್ನೆ ರಾತ್ರಿಯೇ ಪತ್ನಿ , ಮಕ್ಕಳು ಸಾವನ್ನಪ್ಪಿದ್ದಾರೆ. ಅವರಿಗೆ ನಿದ್ದೆ ಮಾತ್ರೆ ಕೊಟ್ಟು ತಲೆದಿಂಬು ಮುಖಕ್ಕೆ ಒತ್ತಿ ಇಟ್ಟು ಕೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ದೇವೇಂದ್ರ ತನ್ನ ಪತ್ನಿ ಮಕ್ಕಳೊಂದಿಗೆ ಮಾ.27ರಂದು ಮಂಗಳೂರಿಗೆ ಬಂದಿದ್ದು, ಲಾಡ್ಜ್ ನಲ್ಲಿ ರೂಮ್ ಪಡೆದಿದ್ದರು. ನಿನ್ನೆ ಸಂಜೆ ಕೊಠಡಿ ಬಿಟ್ಟು ಕೊಡಬೇಕಿತ್ತು. ಆದರೆ, ಕೊಠಡಿ ಬಿಟ್ಟು ತೆರಳದೇ ಇದ್ದುದರಿಂದ ಇಂದು ಬೆಳಗ್ಗೆ ಲಾಡ್ಜ್ ಸಿಬಂದಿ ನೋಡಿದಾಗ, ಕುಟುಂಬ ಸಾವನ್ನಪ್ಪಿರುವುದು ಕಂಡುಬಂದಿದೆ. ಅಣ್ಣ ತಮ್ಮಂದಿರು ಸೇರಿ ವ್ಯವಹಾರ ಮಾಡುತ್ತಿದ್ದರೂ, ಅಣ್ಣ ದೇವೇಂದ್ರನೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ. ಫ್ಯಾಕ್ಟರಿಯಲ್ಲಿ ಆರು ಮಂದಿ ಕೆಲಸ ಮಾಡಿಕೊಂಡಿದ್ದರು. 15 ದಿನಗಳಿಂದ ದೇವೇಂದ್ರ ಕೆಲಸಕ್ಕೆ ಬಂದಿಲ್ಲ. ಸಾಲದ ಬಗ್ಗೆ ತನಗೇನು ತಿಳಿದಿಲ್ಲ ಅಂತಾರೆ ತಮ್ಮ. ಒಟ್ಟಿನಲ್ಲಿ ಇವರು ಏನೆಲ್ಲ ಸಾಲ ಮಾಡಿಕೊಂಡಿದ್ದರೋ ಗೊತ್ತಿಲ್ಲ. ಸಾಲಗಾರರ ಕಿರುಕುಳ, ಕಾಟದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಮಾಯಕ ಇಬ್ಬರು ಹೆಣ್ಮಕ್ಕಳನ್ನು ಕೊಂದು ಮುಗಿಸಿದ್ದಾನೆ ಎನ್ನುವುದು ಎಂಥವರನ್ನೂ ಎದೆ ನಡುಗಿಸುವಂತೆ ಮಾಡಿದೆ.