ನವದೆಹಲಿ: ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದೀಗ ಉಜ್ವಲ ಯೋಜನೆಯನ್ನು ಮತ್ತೆ ಮೂರ ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕ್ಯಾಬಿನೆಟ್ ಅನುಮೋದನೆ ನೀಡಿದೆ. 1,650 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬರೋಬ್ಬರ 75 ಲಕ್ಷ ಅರ್ಹ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಎಲ್ಪಿಜಿ ಗ್ಯಾಸ್ ಸಂಪರ್ಕ ಸಿಗಲಿದೆ.
ಈ ಯೋಜನೆ 2023-24ರಿಂದ 2025-26ರವರೆಗೆ ವಿಸ್ತರಣೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳಿಸಿತ್ತು. ಇತ್ತ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಒಟ್ಟು 400 ರೂಪಾಯಿ ಕಡಿತಗೊಂಡಿತ್ತು. ಇದೀಗ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ನಿರ್ಧರಿಸಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಉಚಿತವಾಗಿ ನೀಡಲಾಗುತ್ತದೆ.
ಉಜ್ವಲ ಯೋಜನೆಯಡಿಯ ಗ್ಯಾಸ್ ಸಂಪರ್ಕ
14.2 ಕೆಜಿ ಸಿಂಗಲ್ ಸಿಲಿಂಡರ್ ಗ್ಯಾಸ್ ಸಂಪರ್ಕ: 2200 ರೂಪಾಯಿ
5ಕೆಜಿ ಡಬಲ್ ಸಿಲಿಂಡರ್ ಸಂಪರ್ಕ: 2200 ರೂಪಾಯಿ
5 ಕೆಜಿ ಸಿಂಗಲ್ ಸಿಲಿಂಡರ್ ಸಂಪರ್ಕ: 1300 ರೂಪಾಯಿ
ಇನ್ನು ಉಜ್ವಲ ಯೋಜನೆಯಡಿ ಪ್ರತಿ14.2 ಕೆಜಿ ಗ್ಯಾಸ್ ಸಿಲಿಂಡರ್ ಮೇಲೆ ಒಟ್ಟು 400 ರೂಪಾಯಿ ಸಬ್ಸಿಡಿ ಸಿಗಲಿದೆ. ಇನ್ನು ಪ್ರತಿ ವರ್ಷ ಸಬ್ಸಡಿ ಅಡಿಯಲ್ಲಿ 12 ಸಿಲಿಂಡರ್ ಪಡೆದುಕೊಳ್ಳಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರ ಹೊರೆ ತಗ್ಗಿಸಿತ್ತು. ಎಲ್ಪಿಜಿ ಗ್ರಾಹಕರಿಗೆ 200 ರು. ಇಳಿಕೆ ಮಾಡಲಾಗಿದ್ದರೆ,
ಉಜ್ವಲಾ ಯೋಜನೆಯಡಿ ಎಲ್ಪಿಜಿ ಸಂಪರ್ಕ ಪಡೆದ ಬಡವರಿಗೆ ಈಗಾಗಲೇ ಇದ್ದ 200 ರು. ಸಬ್ಸಿಡಿಗೆ ಈಗ ಮತ್ತೆ 200 ರು. ಸೇರಿಸಿದೆ. ಹೀಗಾಗಿ ಅವರಿಗೆ ಒಟ್ಟು 400 ರು. ಸಬ್ಸಿಡಿ ಸಿಗಲಿದೆ. ಕರ್ನಾಟಕದಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 1,105 ರು. ಇದೆ. ಅದು ಬುಧವಾರದಿಂದ ಸಾಮಾನ್ಯ ಗ್ರಾಹಕರಿಗೆ 905 ರು.ಗೆ ಹಾಗೂ ಉಜ್ವಲಾ ಫಲಾನುಭವಿಗಳಿಗೆ 705 ರು.ಗೆ ಆಗಲಿದೆ. ಬೆಲೆ ಕಡಿತದಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 10,000 ಕೋಟಿ ರು. ಹೊರೆ ಬೀಳಲಿದೆ ಎಂದು ಹೇಳಲಾಗಿದೆ.