ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ಪಂದ್ಯಗಳಿಗೆ ಟಿಕೆಟ್ ಸಿಗುತ್ತಿಲ್ಲ ಎಂದು ಅಲವತ್ತುಕೊಂಡು, ಸಾಮಾಜಿಕ ತಾಣಗಳಲ್ಲಿ (Social Media) ಹಿಡಿಶಾಪ ಹಾಕುತ್ತಿದ್ದ ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಬಿಸಿಸಿಐ (BCCI) ಮಣಿದಿದೆ.
ಬಿಸಿಸಿಐ ಕ್ರೀಡಾಂಗಣಗಳ ಕೌಂಟರ್ಗಳಲ್ಲಿ ಮಾರಾಟ ಮಾಡಲು ಇರಿಸಿದ್ದ ಟಿಕೆಟ್ಗಳ (CWC Tickets) ಪೈಕಿ ಇನ್ನೂ 4 ಲಕ್ಷ ಹೆಚ್ಚುವರಿ ಟಿಕೆಟ್ಗಳನ್ನ ಆನ್ ಲೈನ್ನಲ್ಲೇ ಅಭಿಮಾನಿಗಳಿಗೆ ಸಿಗುವಂತೆ ಮಾಡಲು ನಿರ್ಧರಿಸಿದೆ. ಶುಕ್ರವಾರ (ಸೆಪ್ಟೆಂಬರ್ 8) ರಾತ್ರಿ 8 ಗಂಟೆಯ ನಂತರ ಕ್ರಿಕೆಟ್ ಅಭಿಮಾನಿಗಳು https://tickets.cricketworldcup.com ವೆಬ್ಸೈಟ್ಗೆ ಭೇಟಿ ನೀಡಿ ಖರೀದಿಸಬಹುದಾಗಿದೆ ಎಂದು ಬಿಸಿಸಿಐ ಪ್ರಕಟಣೆ ಮೂಲಕ ತಿಳಿಸಿದೆ.
ಟೀಂ ಇಂಡಿಯಾ ಸೇರಿದಂತೆ ಮಹತ್ವದ ಪಂದ್ಯಗಳ ಟಿಕೆಟ್ ಮಾರಾಟ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. ಯಾವ್ಯಾವ ಪಂದ್ಯಗಳ ಟಿಕೆಟ್ಗಳು ಖರೀದಿಗೆ ಲಭ್ಯವಿರಲಿವೆ ಎನ್ನುವ ಮಾಹಿತಿಯನ್ನ ಶುಕ್ರವಾರ ಸ್ಪಷ್ಟಪಡಿಸುವುದಾಗಿ ತಿಳಿಸಿದೆ. ಈ ಹಂತದಲ್ಲಿ ಲಭ್ಯವಿರುವ ಎಲ್ಲಾ ಟಿಕೆಟ್ಗಳು ಮಾರಾಟವಾದ ಬಳಿಕ ಅಭಿಮಾನಿಗಳಿಂದ ಬೇಡಿಕೆ ನೋಡಿಕೊಂಡು ಮತ್ತೊಂದು ಹಂತದಲ್ಲಿ ಆನ್ಲೈನ್ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿಯೂ ಬಿಸಿಸಿಐ ಭರವಸೆ ನೀಡಿದೆ. ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ.