ನವದೆಹಲಿ: ” ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ, ಅನ್ನದಾತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರಕಾರ ವಾರ್ಷಿಕವಾಗಿ 6.5 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಕೈಗೊಂಡ ಉಪಕ್ರಮಗಳಿಂದ ರೈತನ ಖಾತೆಗೆ ವಾರ್ಷಿಕ 50 ಸಾವಿರ ರೂ. ಹಣ ಸಂದಾಯವಾಗುತ್ತಿದೆ ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಹಕಾರ ದಿನದ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಭಾಗಿಯಾಗಿ ಶನಿವಾರ ಮಾತನಾಡಿದ ಮೋದಿ, ”2014ರಲ್ಲಿ ಬಿಜೆಪಿ ಕೇಂದ್ರದಲ್ಲಿಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲಾದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳ ಹಾಗೂ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯಂತಹ ಯೋಜನೆಗಳು ರೈತರ ಆದಾಯ ಹೆಚ್ಚಿಸಿವೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಧಾರವಾಗಿದೆ,” ಎಂದು ಹೇಳಿದರು.
”ಖಾದ್ಯ ತೈಲ ವಿಚಾರದಲ್ಲಿ ದೇಶವನ್ನು ಸ್ವಾವಲಂಬಿ ರಾಷ್ಟ್ರವಾಗಿ ಬೆಳೆಸಲು ಸಹಕಾರಿ ಸಂಸ್ಥೆಗಳು ಮುಂದಾಗಬೇಕು,” ಎಂದು ಕರೆ ನೀಡಿದ ಮೋದಿ, ” ರಾಜಕೀಯ ಬದಿಗಿಟ್ಟು ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವ ಕಡೆ ಗಮನ ಕೊಡಬೇಕು. ದೊಡ್ಡ ಮಟ್ಟದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.