ಬೆಂಗಳೂರು : ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ.
2006ರ ನಂತರ ನೇಮಕಾತಿಗೊಂಡ 13,000 ಸರ್ಕಾರಿ ನೌಕರರ ಬೇಡಿಕೆಯಂತೆ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಿ ಸರ್ಕಾರ ಆದೇಶಿಸಿದೆ.
ಎನ್ಪಿಎಸ್ ಅನ್ನು ಹಿಂಪಡೆದು ಹಳೆ ಪಿಂಚಣಿ (ಓಪಿಎಸ್) ವ್ಯವಸ್ಥೆ ಜಾರಿಗೊಳಿಸಿ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅರುಳ್ ಕುಮಾರ್ ಅವರು ಅಧಿಕೃತ ಆದೇಶದ ನಡಾವಳಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಸರ್ಕಾರ ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ಆರು ಷರತ್ತುಗಳನ್ನು ವಿಧಿಸಿದೆ.
ನಾವು ನುಡಿದಂತೆ ನಡೆದಿದ್ದೇನೆ
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, 2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ನಿರ್ಧಾರ ನೆಮ್ಮದಿ ನೀಡಿದೆ
ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.