ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್ಟಿ ಪರೀಕ್ಷೆಯಲ್ಲಿ) ಉತ್ತೀರ್ಣರಾಗಬೇಕೆಂದು ಈ ಹಿಂದೆ ಸರ್ಕಾರ ತಿಳಿಸಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನೌಕರರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರ ಮತ್ತು ದಿನಾಂಕವನ್ನು ಪರಿಶೀಲಿಸಿ ಪ್ರೋತ್ಸಾಹ ಧನ
ಮಂಜೂರು : ಪ್ರೋತ್ಸಾಹ ಧನದ ಸೌಲಭ್ಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ಸರ್ಕಾರದ ಆದೇಶದಲ್ಲಿ ಕರ್ನಾಟಕ ಸಿವಿಲ್ ಸೇವಾ (( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ನಿಯಮಗಳು 2012 ಜಾರಿಗೆ ಬಂದ ದಿನಾಂಕ :22.03.2012 ರ ಪೂರ್ವದಲ್ಲಿ ನೇಮಕಾತಿ ಹೊಂದಿರುವ ಹಾಗೂ ದಿನಾಂಕ:17.04.2021ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರು,
ಹಾಜರುಪಡಿಸುವ ಡಿಜಿಟಲ್ ಸಹಿಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಪ್ರೋತ್ಸಾಹ ಧನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಸದರಿ ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ವೇತನ ಪಡೆಯುವ ಲೆಕ್ಕಶೀರ್ಷಿಕೆಯಡಿಯಲ್ಲಿ ಭರಿಸಲು ಆದೇಶಿಸಲಾಗಿರುತ್ತದೆ
ಮೊದಲನೇ ಕಂತಿನಲ್ಲಿ ಹಣ ಬಿಡುಗಡೆ ಮಾಡಲು ಸರ್ಕಾರದ ಆದೇಶ
ಅದರಂತೆ ಕ್ರಮಾಂಕ (02) ಸರ್ಕಾರದ ಅನುದಾನ ಬಿಡುಗಡೆ ಆದೇಶದಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಪ್ರೋತ್ಸಾಹಧನವನ್ನು ಪಾವತಿಸಲು 2023-24 ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ 2202-03-103-2-01 238 ಸರ್ಕಾರಿ ಕಾಲೇಜುಗಳು 051 ಸಾಮಾನ್ಯ ವೆಚ್ಚದಡಿ ರೂ.223.65/ ಲಕ್ಷಗಳು ಬಿಡುಗಡೆಯಾಗಿದ್ದು ಸದರಿ ಅನುದಾನದಲ್ಲಿ ರೂ.192.40/ ( ಒಂದು ನೂರ ತೊಂಬತ್ತೆರಡು ಲಕ್ಷದ ನಲವತ್ತು ಸಾವಿರ ರೂಪಾಯಿಗಳು ಮಾತ್ರ )ಗಳನ್ನು ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಿಗೆ ಮಾತ್ರ ಪ್ರೋತ್ಸಾಹ ಧನ :
ಸರ್ಕಾರವು ನೀಡಿದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ದಿನಾಂಕ : 22.03.2012 ರಂದು ಸೇವೆಯಲ್ಲಿದ್ದು ದಿನಾಂಕ : 17.04.2021 ರೊಳಗೆ ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರುಗಳಿಗೆ ಪ್ರೋತ್ಸಾಹ ಧನವನ್ನು ಪಾವತಿಸಲು ಆದೇಶ ಹೊರಡಿಸಿದೆ.
ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ಪಡೆಯುವ ವೇತನದಲ್ಲಿ ಸೇರಿಸಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಯಿತು. ನೌಕರರಿಗೆ ನೀಡಲ್ಪಡುವ ಪ್ರಮಾಣಪತ್ರದ ನಮೂನೆ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ನೀಡಲು ತಡೆ ನೀಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿರುವುದರಿಂದ ಪ್ರೋತ್ಸಾಹಧನ ನೀಡಲು ಕ್ರಮ ವಹಿಸಲಾಗಿದೆ.