ಬೆಂಗಳೂರು: ಆಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಗುಡ್ ನ್ಯೂಸ್ ನೀಡಿದೆ. ಹೌದು ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಕಟ್ಟುವವರಿಗೆ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಷ್ಟೆ ಅಲ್ಲದೇ ಈ ಬಾರಿ ಅವಧಿಯನ್ನು ಮೇ 1ರಿಂದ ಜುಲೈ 31ರವರೆಗೆ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಡಿಸಿದ ಸುತ್ತೋಲೆ ಪ್ರಕಾರ, ತೆರಿಗೆದಾರರು 2024-25ನೇ ಹಣಕಾಸು ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿದರೆ ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ ವಿನಾಯಿತಿ ನೀಡುವ ಸೌಲಭ್ಯವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.
ಇನ್ನೇನು ಲೋಕಸಭೆ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ತೆರಿಗೆ ಪಾವತಿಗಳ ಪ್ರಕ್ರಿಯೆಗೊಳಿಸಲು ಕಷ್ಟವಾಗಲಿದೆ ತಿಳಿಸಲಾಗಿದೆ.ಇದಲ್ಲದೆ, ಏಪ್ರಿಲ್ ತಿಂಗಳಲ್ಲಿ ಹಲವಾರು ಸಾರ್ವಜನಿಕ ರಜಾದಿನಗಳಿವೆ. ತೆರಿಗೆ ಪಾವತಿದಾರರು ಅವುಗಳನ್ನು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಮತ್ತು ಆಸ್ತಿ ತೆರಿಗೆ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು, ತೆರಿಗೆ ಪಾವತಿದಾರರಿಗೆ ಶೇಕಡಾ 5 ರಷ್ಟು ರಿಯಾಯಿತಿ ಅವಧಿಯನ್ನು ಮೇ 1ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50 ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಒಟಿಎಸ್ ಜಾರಿ ಮಾಡಿ ಅಧಿಸೂಚನೆ ಹೊರಡಿಸಿತ್ತು.ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಕೊಂಡವರಿಗೆ ಅಥವಾ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿ ಕಡಿಮೆ ತೆರಿಗೆ ಪಾವತಿಸಿದ ಮಾಲೀಕರಿಗೆ ವಿಧಿಸಲಾಗುತ್ತಿದ್ದ ಎರಡು ಪಟ್ಟು ದಂಡದ ಮೊತ್ತವನ್ನು ಶೇ.50ಕ್ಕೆ ಇಳಿಕೆ ಮಾಡಲಾಗಿದ್ದು, ಪಾವತಿಗಾಗಿ ಒನ್ ಟೈಮ್ ಸೆಟ್ಲ್ಮೆಂಟ್ ಜಾರಿ ಮಾಡಲಾಗಿದೆ.