ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆ ಯನ್ನು ಶೇ 4ಷ್ಟು ಹೆಚ್ಚಿಸಿ (DA Hike) ಮಂಗಳವಾರ ಆದೇಶ ಹೊರಡಿಸಿದೆ.
ಪರಿಷ್ಕೃತ ತುಟ್ಟಿ ಭತ್ಯೆ 2023ರ ಜನವರಿ 1ರಿಂದಲೇ ಪೂರ್ವಾನ್ವಯವಾಗಲಿದೆ. 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2023 ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಹೆಚ್ಚಿಸಲಾಗಿದೆ.
ಮೂಲ ವೇತನದ ಶೇಕಡ 31 ರಿಂದ ಶೇಕಡ 35 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತುಟ್ಟಿಭತ್ಯೆಯ ಉದ್ದೇಶಕ್ಕಾಗಿ ಮೂಲ ವೇತನ ಮತ್ತು ಅದರಲ್ಲಿ ಸ್ಥಗಿತ ವೇತನ ಬಡ್ತಿ, ಇತರೆ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ ಅದು, ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ನೀಡಲಾಗಿದ್ದಲ್ಲಿ ಅವುಗಳು ಸೇರಿರುತ್ತವೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.