ಬೆಂಗಳೂರು: HSRP ಹೆಸರಲ್ಲಿ ವ್ಯಾಪಕ ಆನ್ಲೈನ್ ವಂಚನೆ ನಡೆಯುತ್ತಿದೆ.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಚಿಸಿದ್ದ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯದ ಎಲ್ಲ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ ನೀಡಿದ ಗಡುವು ಸಮೀಪ ಬಂದಿದೆ. ಆದರೆ ಇದೀಗ ಸರ್ಕಾರ ಅಂತಿಮ ಗಡುವಿನ ಅವಧಿಯನ್ನು ವಿಸ್ತರಣೆ ಮಾಡಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದ ಮೂರು ತಿಂಗಳುಗಳವರೆಗೆ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಿಸುವಂತೆ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಇದುವರೆಗೂ 18 ಲಕ್ಷ ವಾಹನಗಳಷ್ಟೇ ನೋಂದಣಿ ಆಗಿದ್ದು ಇದರ ಬಗ್ಗೆ ಆನ್ಲೈನ್ ವಂಚನೆ ಸಹ ನಡೆಯುತ್ತಿದೆ. ಹೀಗಾಗಿ ಅವಧಿಯನ್ನು ವಿಸ್ತರಣೆ ಮಾಡುವುದರ ಜತೆಗೆ ಇಂತಹ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಜಿ. ಮಾದೇಗೌಡ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೋಂದಣಿಯನ್ನು ವಿಸ್ತರಣೆ ಮಾಡುವ ಬಗ್ಗೆ ಸರ್ಕಾರವೂ ಚಿಂತನೆ ನಡೆಸಿದ್ದು, ಮತ್ತೆ ಮೂರು ತಿಂಗಳು ಮುಂದಕ್ಕೆ ಹಾಕುತ್ತೇವೆ. ಅಲ್ಲದೆ, ಈ ಸಂಬಂಧ ಆನ್ಲೈನ್ ವಂಚನೆ ಬಗ್ಗೆ ಗಮನಹರಿಸುತ್ತೇವೆ ಎಂದಿದ್ದಾರೆ.