ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಗೆಸೊಪ್ಪು ನಾಟಿಯು ಚುರುಕುಗೊಂಡಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪಿಯಲ್ಲಿ ಕಳೆದ ಒಂದು ವಾರದಿಂದ ಹದಮಳೆಯು ಸುರಿಯುತ್ತಿದ್ದು, ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪು ಬೆಳೆಗಾರರು ಸಸಿಗಳ ನಾಟಿ ಮತ್ತು ಆರೈಕೆಯಲ್ಲಿ ತೊಡಗಿದ್ದಾರೆ.
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಂಡಳಿಯ ವತಿಯಿಂದ ರಸಗೊಬ್ಬರವನ್ನು ನೀಡಲು ಪ್ರಾರಂಭಿಸಿದ್ದು, ತಂಬಾಕು ಬೆಳೆಗಾರರು ಶೀಘ್ರದಲ್ಲಿ ತಮ್ಮ ಪರವಾನಗಿಯನ್ನು ನವೀಕರಿಸಿಕೊಂಡು ಗೊಬ್ಬರ ಪಡೆದು ಸಕಾಲದಲ್ಲಿ ಬೆಳೆಗೆ ಒದಗಿಸಿ ಉತ್ತಮ ದರ್ಜೆಯ ತಂಬಾಕು ಉತ್ಪಾದನೆಗೆ ಒತ್ತು ನೀಡಲು ಮಾರುಕಟ್ಟೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸದ್ಯ ತಂಬಾಕು ಮಂಡಳಿಯ ವತಿಯಂದ ಕಾಲ್ಸಿಯಂ ನೈಟ್ರೇಟ್, ಡೈ ಅಮೋನಿಯಂ ಫಾಸ್ಪೇಟ್, ಸಲ್ಪರ್ ಆಫ್ ಫಾಸ್ಪೆಟ್, ಅಮೋನಿಯಂ ಸಲ್ಪೆಟ್ ರಾಸಾಯನಿಕ ಗೊಬ್ಬರಗಳನ್ನು ನೀಡುತ್ತಿದ್ದು, ಸಿಂಗಲ್ ಬ್ಯಾರಲ್ಗೆ 31 ಸಾವಿರ ರೂ. ಮತ್ತು ಡಬಲ್ ಬ್ಯಾರಲ್ ಪರವಾನಗಿ ಹೊಂದಿರವವರಿಗೆ 62 ಸಾವಿರ ರೂ. ಬೆಲೆಯ ಗೊಬ್ಬರ ನೀಡಲಾಗುತ್ತಿದೆ. ಫ್ಲಾಟ್ ಫಾರಂ 7 ವ್ಯಾಪ್ತಿಯ 9 ಕ್ಲಸ್ಟರ್ ಮತ್ತು ಫ್ಲಾಟ್ ಫಾರಂ 63 ರ ವ್ಯಾಪ್ತಿಯ 8 ಕ್ಲಸ್ಟರ್ಗಳ ಸುಮಾರು 5300 ತಂಬಾಕು ಬೆಳೆಗಾರರು ಗೊಬ್ಬರವನ್ನು ಪಡೆಯಬೇಕಿದೆ.
ಹೊಗೆಸೊಪ್ಪು ನಾಟಿಗೆ ಅಗತ್ಯವಾದ ವಾತಾವರಣವಿದ್ದು, ಬೆಳೆ ನಿರ್ವಹಣೆಯಲ್ಲಿ ತೊಡಗಿರುವ ರೈತರು ಉತ್ಕೃಷ್ಟ ದರ್ಜೆಯ, ಗುಣಮಟ್ಟದ ತಂಬಾಕನ್ನು ಉತ್ಪಾದನೆ ಮಾಡುವತ್ತ ಗಮನಹರಿಸಿ ಬೆಳೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡಬೇಕು. ಹೊಗೆ ಸಸಿಗಳನ್ನು ನಾಟಿ ಮಾಡಿದ 15 ದಿನಗಳೊಳಗೆ ಮೊದಲ ಬಾರಿಗೆ ಡೈ ಅಮೋನಿಯಂ ಫಾಸ್ಪೇಟ್ (ಡಿಎಪಿ), ಸಲ್ಪರ್ ಆಫ್ ಫಾಸ್ಪೆಟ್ (ಎಸ್ಓಪಿ), ಅಮೋನಿಯಂ ಸಲ್ಪೆಟ್ (ಎ ಎಸ್) ಮತ್ತು ಕ್ಯಾಲ್ಸಿಯಂ ನೈಟ್ರೇಟ್ (ಸಿಎನ್) ಗೊಬ್ಬರಗಳನ್ನು ನೀಡಬೇಕು.
ಸಾಮಾನ್ಯವಾಗಿ ರೈತರು ಡಿಎಪಿ, ಎಸ್ಓಪಿ, ಎಎಸ್ ಮತ್ತು ಸಿಎನ್ ಗೊಬ್ಬರಗಳನ್ನು ಒಟ್ಟಿಗೆ ಮಿಶ್ರಣಮಾಡಿ ಗಿಡಕ್ಕೆ ಒದಗಿಸುವುದನ್ನು ರೂಢಿಮಾಡಿಕೊಂಡಿದ್ದು, ಈ ಕ್ರಮದಿಂದಾಗಿ ಮಣ್ಣು ಮತ್ತು ಬೆಳೆಗೆ ಸಿಗಬೇಕಿರುವ ಪೋಷಕಾಂಶಗಳು ಸಿಗುವುದಿಲ್ಲ. ಒಟ್ಟಿಗೆ ನೀಡಿದಾಗ ರಾಸಾಯನಿಕವಾಗಿ ವ್ಯತಿರಿಕ್ತ ಪರಿಣಾಮ ಬೀರಿ ಹಾಕಿದ ಗೊಬ್ಬರವು ಸಾರವು ಬೆಳೆಗೆ ಸಿಗದೆ ಭೂಮಿಯಲ್ಲಿಜಡವಾಗಿ ಉಳಿದು ವ್ಯರ್ಥವಾಗುವುದಲ್ಲದೇ ಸುಮಾರು 6 ಸಾವಿರ ರೂ. ನಷ್ಟವಾದಂತಾಗುತ್ತದೆ. ಒದಗಿಸಿದ ಗೊಬ್ಬರದ ಶೇ.100 ರಷ್ಟು ಪೋಷಕಾಂಶಗಳು ದೊರೆಯಬೇಕಾದಲ್ಲಿನಾಲ್ಕು ಬಗೆಯ ಗೊಬ್ಬರಗಳನ್ನು ಒಟ್ಟಿಗೆ ಮಿಶ್ರಣಮಾಡುವ ಬದಲು ಕಾಲ್ಸಿಯಂ ನೈಟ್ರೇಟ್ ಅನ್ನು ಪ್ರತ್ಯೇಕವಾಗಿ ನೀಡುವುದು ಅತ್ಯುತ್ತಮ ವಿಧಾನವಾಗಿದೆ ಎಂದು ಮಾರುಕಟ್ಟೆ 7 ರ ವ್ಯವಸ್ಥಾಪಕರಾದ ಐಸಾಕ್ ಎಸ್.ದತ್ ತಿಳಿಸಿದ್ದಾರೆ.