ಬೆಂಗಳೂರು ;- ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಭಾನುವಾರಗಿಂದ ಶುರುವಾಗಿದೆ. ಮೊದಲ ದಿನ ಸುಮಾರು 55,000 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿದೆ. ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ಮಾಡಲಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಅರ್ಜಿ ಸಲ್ಲಿಕೆ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55,000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಭಾನುವಾರ ರಜಾ ದಿನವಾದರೂ, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಯೋಜನೆಗಾಗಿ ಅರ್ಜಿ ನೋಂದಾಯಿಸಿಕೊಂಡರು. ಗ್ರಾಹಕರು ಯೋಜನೆ ನೋಂದಣಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಮೊಬೈಲ್, ಲ್ಯಾಪ್ ಟಾಪ್ ಅಥವಾ ಸೈಬರ್ ಸೆಂಟರ್ಗಳಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ, ಇಲ್ಲವೆ 24×7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದೆ.