ನಾನು ಕೇಂದ್ರ ಸಚಿವನಾಗಿ ರಾಜ್ಯಕ್ಕೆ ಬರುವುದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಸಹಕಾರ ಕೇಳುವ ರಾಜ್ಯ ಸರ್ಕಾರ ಒಬ್ಬ ಕೇಂದ್ರ ಸಚಿವ ರಾಜ್ಯಕ್ಕೆ ಬರುವುದನ್ನು ಸಹಿಸುತ್ತಿಲ್ಲ.
ಶನಿವಾರ ಉತ್ತರ ಕನ್ನಡ ಜಿಲ್ಲೆಯ ಶಿಶೂರು ಬಳಿ ಗುಡ್ಡ ಕುಸಿದ ಸ್ಥಳಕ್ಕೆ ನಾನು ಭೇಟಿ ನೀಡಿದಾಗ ಐದು ಕಿ.ಮೀ. ಹಿಂದೆಯೇ ಬ್ಯಾರಿಕೇಡ್ಗಳನ್ನು ಹಾಕಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಯಿತು. ನಾನು ಮಳೆಹಾನಿ ಸಮೀಕ್ಷೆ ನಡೆಸಿದ್ದನ್ನು ವರದಿ ಮಾಡಬಾರದು ಎಂದು ಈ ರೀತಿ ನಿರ್ಬಂಧ ಹೇರಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಎಂದರೆ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಇವರು? ನಾನು ಬರಲೇಬಾರದು ಎನ್ನುವ ರೀತಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ. ಮಂಡ್ಯಕ್ಕೆ ಹೋದರೂ ಬೇಡ ಎನ್ನುತ್ತಾರೆ, ಉತ್ತರ ಕನ್ನಡ ಜಿಲ್ಲೆಗೆ ಹೋದರೂ ಎಂದರೆ ಅಲ್ಲಿಗೂ ಬೇಡ ಎನ್ನುತ್ತಾರೆ. ಸದ್ಯ ಹಾಸನಕ್ಕೆ ಬರಬೇಡಿ ಎನ್ನಲಿಲ್ಲ. ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದರೆ ಇವರಿಗೆ ಕೈಕಾಲು ನಡುಗುತ್ತದೆ ಎಂದು ಕುಟುಕಿದ್ದಾರೆ.