ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ದೊರೆಯುತ್ತಿದ್ದಂತೆ ಮಹಿಳೆಯರು ರಾಜ್ಯದ ಪ್ರಸಿದ್ಧ ದೇವಸ್ಥಾನ ಮತ್ತು ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ.
ಇದೀಗ ದೇವಸ್ಥಾನದ ಟ್ರಿಪ್ ಮುಗಿಯುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಕಾರುಬಾರು ಶುರುಮಾಡಿದ್ದಾರೆ.. ಬಸ್ ಫ್ರೀ ಅಂತ ಚಿಕ್ಕಪುಟ್ಟ ಚಿಕಿತ್ಸೆಗೂ ಮಹಿಳೆಯರು ನಗರದ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ವಾಣಿ ವಿಲಾಸ್, ಕಿದ್ವಾಯಿ, ಕೆ.ಸಿ ಜನರಲ್ ಆಸ್ಪತ್ರೆ, ಜಯದೇವ ಆಸ್ಪತ್ರೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರತಿ ಆಸ್ಪತ್ರೆಗಳಲ್ಲಿಯೂ ಕಳೆದ ಒಂದು ತಿಂಗಳಿನಿಂದ ಶೇ 35 ರಿಂದ 40 ರಷ್ಟು ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಚಿಕ್ಕಮಗಳೂರು ಸೇರಿದಂತೆ ಹಲವು ಭಾಗದಿಂದ ರೋಗಿಗಳು ಬಸ್ ಫ್ರೀ ಅಂತ ಸಣ್ಣ ಪುಟ್ಟ ಚಿಕಿತ್ಸೆಗೆ ನಗರದ ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದ ಪ್ರತಿ ನಿತ್ಯವೂ ಒಪಿಡಿ ರಶ್ ಆಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿಗಳು ಪರದಾಡುವಂತಾಗಿದೆ.
ಇದರಿಂದ ಬೇಸತ್ತ ಆಸ್ಪತ್ರೆ ವೈದ್ಯಾಧಿಕಾರಿಗಳು ಒಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ. ದಯವಿಟ್ಟು ಯಾರೂ ಸಣ್ಣಪುಟ್ಟ ಚಿಕಿತ್ಸೆಗೆ ಬರಬೇಡಿ ಎಂದು ರೋಗಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿ ಘಟನೆಯಲ್ಲಿ ರಾಜಕೀಯ ಬೇಡ, ಮಕ್ಕಳ ಹಿತಾಸಕ್ತಿ ಮುಖ್ಯ- ಲಕ್ಷ್ಮಿ ಹೆಬ್ಬಾಳ್ಕರ್