ಹುಬ್ಬಳ್ಳಿ: ಯಾವುದೇ ಪೂರ್ವಾಪರ ಯೋಚನೆಯಿಲ್ಲದೆ ಜಾರಿಗೊಳಿಸಿದ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸರಕಾರದಿಂದ ಆಗುತ್ತಿಲ್ಲ. ಹೀಗಾಗಿ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರಕಾರ ಇನ್ನೊಂದು ಮಾರ್ಗದಲ್ಲಿ ನಡೆಯುತ್ತಿದೆ.
ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಸರಕಾರ ಮಾಡುತ್ತಿದೆ. ಅಽಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ಅನರ್ಹ ಕಾರ್ಡುಗಳಿವೆ ಎಂಬುವುದು ಗೊತ್ತಾಗಿದೆ ಅನ್ನಿಸುತ್ತಿದೆ. ಎಲ್ಲಾ ಚುನಾವಣೆಗಳು ಮುಗಿದ ನಂತರ ಬಿಪಿಎಲ್ ಕಾರ್ಡುಗಳಿಗೆ ಕೈ ಹಾಕಿರುವುದು ಗ್ಯಾರಂಟಿ ಯೋಜನೆ ನಿಲ್ಲಿಸುವ ಸೂಚನೆಯಾಗಿದೆ ಎಂದು ಆರೋಪಿಸಿದರು.
ಸರಕಾರಕ್ಕೆ ವಾಲ್ಮಿಕಿ ಹಗರಣ, ಮುಡಾ ಹಗರಣದ ಸೇರಿದಂತೆ ಇತರೆ ಅವ್ಯವಹಾರಗಳು ರಾಜ್ಯ ಸರಕಾರಕ್ಕೆ ಕೆಟ್ಟು ಹೆಸರು ಬಂದಿದೆ. ಇದನ್ನು ಮರೆ ಮಾಚುವ ಉದ್ದೇಶದಿಂದ ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡುವ ಕೆಲಸ ಶುರು ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರವನ್ನು ಬೀಳಿಸುವ ಕೆಲಸ ಮಾಡಿಲ್ಲ.
ಶಾಸಕರ ಖರೀದಿಗೆ ಆಮೀಷವೊಡ್ಡಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಇದನ್ನು ಶಾಸಕ ರವಿ ಗಣಿಗ ಅವರ ಮೂಲಕ ಹೇಳಿಸಿದ್ದಾರೆ. ಸರಕಾರದ ಬಳಿ ಈ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ರೀತಿ ವಿಷಯಾಂತರ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತದಲ್ಲ ಎಂದರು.