ಮುಂಬೈ: ಎರಡು ಪ್ರಮುಖ ರಸ್ತೆಗಳಿಗೆ ಮಹಾರಾಷ್ಟ್ರ (Maharashtra) ಸರ್ಕಾರ ಮರುನಾಮಕರಣ ಮಾಡಿದೆ. ವರ್ಸೋವಾ-ಬಾಂದ್ರಾ ಸೀ ಲಿಂಕ್ ಅನ್ನು ವೀರ ಸಾವರ್ಕರ್ ಸೇತು (Veer Savarkar Setu) ಮತ್ತು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವ ಶೇವಾ ಅಟಲ್ ಸೇತು (Atal Bihari Vajpayee Smruti Nhava Sheva Atal Setu) ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.
ವಿನಾಯಕ ದಾಮೋದರ್ ಸಾವರ್ಕರ್ ಹಿಂದೂ ರಾಷ್ಟ್ರೀಯವಾದಿ ನಾಯಕ. 1910 ರಲ್ಲಿ ಅವರನ್ನು ಬಂಧಿಸಿ 1911 ರಲ್ಲಿ 50 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. 1921 ರಲ್ಲಿ ‘ಎಸೆನ್ಷಿಯಲ್ಸ್ ಆಫ್ ಹಿಂದುತ್ವ’ ಎಂಬ ಪುಸ್ತಕವನ್ನು ಬರೆದರು.
ಅಟಲ್ ಬಿಹಾರಿ ವಾಜಪೇಯಿ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.