ಬೆಂಗಳೂರು: 2 ತಿಂಗಳು ಬೇಸಿಗೆ ರಜೆ ಬಳಿಕ 2023 – 24ರ ಶೈಕ್ಷಣಿಕ ವರ್ಷದಂತೆ ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭವಾಗಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶುರುವಾಗಿದ್ದು ಸರ್ಕಾರಿ ಶಾಲೆಗಳು ಮಾತ್ರ ಇಂದಿನಿಂದ ಶುರುವಾಗಿವೆ.
ಮೇ 29ರಂದೇ ಶಾಲೆಗಳಲ್ಲಿ ಚಟುವಟಿಕೆ ಶುರುವಾಗಿದ್ದು, ಮೇ 31 ರಿಂದ ಅಧಿಕೃತವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಓಪನ್ ಆಗಿವೆ. ಮಕ್ಕಳ ಸ್ವಾಗತಕ್ಕಾಗಿ ಶಿಕ್ಷಕರು(Teacher) ಮತ್ತು ಸಿಬ್ಬಂದಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜಾಗಿದ್ದಾರೆ. ಅದಕ್ಕಾಗಿ ಶಿಕ್ಷಣ ಇಲಾಖೆ ಕೂಡ ಕೆಲ ಸೂಚನೆಗಳನ್ನ ನೀಡಿತ್ತು.
ಇಲಾಖೆ ಸೂಚನೆಯಂತೆ ಶಾಲಾ ಪ್ರಾರಂಭಕ್ಕೆ ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಶಾಲೆಯ ಪ್ರತಿಯೊಂದು ಕೊಠಡಿ, ಶೌಚಾಲಯ, ಆವರಣ ಸೇರಿದಂತೆ ಶಾಲೆ ಸುತ್ತಮುತ್ತ ಎಲ್ಲವನ್ನೂ ಸ್ವಚ್ಛಗೊಳಿಸಲಾಗಿದೆ.
ಎರಡು ತಿಂಗಳ ಬೇಸಿಗೆ ರಜೆ ಬಳಿಕ ಮರಳಿ ಶಾಲೆಗೆ ಬರುತ್ತಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಯನ್ನು ಸಿಂಗರಿಸಿ ಟೀಚರ್ಸ್ ಹುಮ್ಮಸ್ಸಿನಿಂದ ರೆಡಿ ಆಗಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಸರ್ಕಾರಿ ಮತ್ತು ಅನುದಾನಿ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಲಾಗಿದ್ದು, ಸಮವಸ್ತ್ರ ಹಾಗು ಪಠ್ಯಪುಸ್ತಕಗಳ ಕೊರತೆಯಾಗದಂತೆ ವಿತರಣೆಗೆ ಅಗತ್ಯ ಕ್ರಮ ವಹಿಸುವಂತೆ ಹಾಗೂ ಬಿಸಿಯೂಟವನ್ನು ಮೊದಲ ದಿನದಿಂದಲೇ ಆರಂಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶಿಕ್ಷಣ ಇಲಾಖೆಯ ಸೂಚನೆ
- ಮೇ.31ಕ್ಕೆ ಮಕ್ಕಳಿಗೆ ಹೂ, ಚಾಕ್ಲೇಟ್, ಸಿಹಿ ನೀಡಿ ಸ್ವಾಗತಿಸಿ
- ಆಟದ ಮೈದಾನ, ತರಗತಿ, ಲೈಬ್ರರಿ ಸ್ವಚ್ಛಗೊಳಿಸಲು ಸೂಚನೆ
- ಮಳೆಗೆ ಶಾಲಾ ಕೊಠಡಿಗಳು ಸೋರದಂತೆ ಕ್ರಮ ಕೈಗೊಳ್ಳಿ
- ಮೊದಲ ದಿನದಿಂದ ಬಿಸಿಯೂಟ ಕಡ್ಡಾಯವಾಗಿ ನೀಡಿ
- ಪಾಠ ಮರೆತಿರುವ ಮಕ್ಕಳತ್ತ ವಿಶೇಷ ಗಮನ ಹರಿಸಿ
- ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳ ಕರೆ ತರುವ ಯತ್ನ ಮಾಡ್ಬೇಕು
- ಗ್ರಾಮಗಳಲ್ಲಿ ಜಾಥಾ ಮಾಡಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ
- ಸರ್ಕಾರದ ಸೌಲಭ್ಯಗಳ ಕುರಿತು ಕರಪತ್ರಗಳನ್ನ ಹಂಚಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ