ಬಾಲಿವುಡ್ ಹಿರಿಯ ನಟ ಗೋವಿಂದ್ ಅ.1ರಂದು ಮುಂಜಾನೆ ತಮ್ಮದ್ದೇ ಗನ್ ನಿಂದ ಕಾಲಿಗೆ ಆಕಸ್ಮಿಕವಾಗಿ ಫೈರ್ ಮಾಡಿಕೊಂಡಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ಅಭಿಮಾನಿಗಳು ಕಂಗಲಾಗಿದ್ದರು. ಸದ್ಯ ನಟನ ಆರೋಗ್ಯ ಸುಧಾರಿಸಿದೆ. ಕಾಲಿಗೆ ಹೊಕ್ಕಿದ್ದ ಗುಂಡನ ತೆಗೆದ ವೈದ್ಯರು 8ರಿಂದ 10 ಹೊಲಿಗೆ ಹಾಕಿದ್ದಾರೆ.
‘ಗೋವಿಂದ ಅವರಿಗೆ 8ರಿಂದ 10 ಹೊಲಿಗೆ ಹಾಕಿದ್ದೇವೆ. ಇನ್ನು ಎರಡು-ಮೂರು ದಿನದಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಮೊಣಕಾಲಿನಿಂದ ಎರಡು ಇಂಚು ಕೆಳಗಿನ ಜಾಗದಲ್ಲಿ ಅವರಿಗೆ ಗುಂಡೇಟು ಆಗಿದೆ’ ಎಂದು ಮುಂಬೈನ ಖಾಸಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತಮ್ಮ ಭದ್ರತೆಗಾಗಿ ಇಟ್ಟುಕೊಂಡಿದ್ದ ರಿವೋಲ್ವಾರ್ ಆಕಸ್ಮಿಕವಾಗಿ ಫೈರ್ ಆದ ಪರಿಣಾಮದಿಂದ ಗೋವಿಂದ ಅವರಿಗೆ ಗುಂಡೇಟು ತಗುಲಿತ್ತು.
ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಗೋವಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಗೋವಿಂದ ಸಹೋದರ ಕೀರ್ತಿ ಕುಮಾರ್, ಮಗಳು ಟೀನಾ ಅಹುಜಾ ಮುಂತಾದವರು ಆಸ್ಪತ್ರೆಗೆ ಆಗಮಿಸಿ ನಟನ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಗೋವಿಂದ್ ಚೇತರಿಸಿಕೊಳ್ಳುತ್ತಿದ್ದು ಆದಷ್ಟು ಬೇಗ ಅಭಿಮಾನಿಗಳ ಮುಂದೆ ಬರುವುದಾಗಿ ಹೇಳಿಕೊಂಡಿದ್ದಾರೆ.
‘ಅಭಿಮಾನಿಗಳು, ದೇವರು ಮತ್ತು ನನ್ನ ತಂದೆ-ತಾಯಿ ಆಶೀರ್ವಾದದಿಂದ ನಾನು ಗುಣಮುಖನಾಗುತ್ತಿದ್ದೇನೆ. ನನಗೆ ಗುಂಡೇಟು ಆಗಿತ್ತು. ಈಗ ಬುಲೆಟ್ ತೆಗೆಯಲಾಗಿದೆ. ಇಲ್ಲಿನ ವೈದ್ಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಗೋವಿಂದ ಅವರು ಹೇಳಿಕೆ ನೀಡಿದ್ದಾರೆ. ‘ಆದಷ್ಟು ಬೇಗ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ. ಆ ಭರವಸೆ ನಮಗೆ ಇದೆ. ಕಾಲಿಗೆ ಗುಂಡು ತಾಗಿದೆ. ರಿವೋಲ್ವಾರ್ ಕೈ ಜಾರಿ ಕೆಳಗೆ ಬಿದ್ದಾಗ ಗುಂಡು ಹಾರಿತ್ತು’ ಎಂದು ಗೋವಿಂದ ಸಹೋದರ ಕೀರ್ತಿ ಕುಮಾರ್ ತಿಳಿಸಿದ್ದಾರೆ.