ಬೆಂಗಳೂರು: 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರ ಸಂಘ ಹೇಳಿದೆ. ಅದರಂತೆ ನಾಳೆ (ಮಾರ್ಚ್ 1) ರಾಜ್ಯಾದ್ಯಂತ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಇಂದು ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 9.30ಕ್ಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ಸರ್ಕಾರಿ ನೌಕರರ ಮನವೊಲಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿದಂತೆ ಹಲವು ನೌಕರ ಮುಖಂಡರ ಜತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇಂದು ಮಧ್ಯಾಹ್ನ ನಡೆಸಿದ್ದ ಸಭೆ ವಿಫಲವಾಗಿದೆ. ಇದರ ಬೆನ್ನಲ್ಲೇ ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಲು ಸರ್ಕಾರ ಮುಂದಾಗಿದೆ. ಸಿಎಸ್ ಷಡಕ್ಷರಿ ಜತೆ ವಂದಿತಾ ಶರ್ಮಾ ಅವರು ಸಂಜೆ ಸಭೆ ನಡೆಸಲಿದ್ದಾರೆ.
ನಾಳೆ (ಮಾರ್ಚ್ 1) ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು ಕಚೇರಿಗಳಿಗೆ ತೆರಳದೆ ಮುಷ್ಕರ ನಡೆಸಲಿದ್ದಾರೆ. ಮುಷ್ಕರದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ಯಾವಾಗ ಸಭೆಗೆ ಕರೆದರೂ ಭಾಗವಹಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ಹೇಳಿದ್ದಾರೆ.