ನವದೆಹಲಿ: ‘‘ಅದಾನಿ ಕಂಪನಿ ವಿರುದ್ಧ ಹೊಸದಾಗಿ ಕೇಳಿ ಬಂದಿರುವ ಸಂಘಟಿತ ಅಪರಾಧ ಹಾಗೂ ಭ್ರಷ್ಟಾಚಾರದ ಆರೋಪದ ವರದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಮುಂದೆ ಸ್ಪಷ್ಟನೆ ನೀಡಬೇಕು,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ”ಅದಾನಿ ಸಂಸ್ಥೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಗೆ ಸರಕಾರ ಕೂಡಲೇ ಜಂಟಿ ಸದನ ಸಮಿತಿ ರಚನೆ ಮಾಡಬೇಕು.
ಆರ್ಥಿಕ ಅಪರಾಧ ಕುರಿತ ತನಿಖೆ ನಡೆಸಲು ಸರಕಾರ ಹಿಂಜರಿಯುತ್ತಿದೆ. ಈ ವಿಚಾರದಲ್ಲಿ ಪ್ರಧಾನಿ ಅವರ ಮೌನ ಹಲವು ಸಂಶಯ ಹುಟ್ಟು ಹಾಕಿದೆ. ಅದಾನಿ ಕಂಪನಿ ವ್ಯವಹಾರ ವಿಚಾರದಲ್ಲಿ ಗಂಭೀರ ಸ್ವರೂೕಪದ ಆರೋಪಗಳಿವೆ. ಸರಕಾರ ಕೂಡಲೇ ಸಮಗ್ರ ತನಿಖೆಗೆ ಮುಂದಾಗಬೇಕು,” ಎಂದು ಆಗ್ರಹಿಸಿದರು. ಮಾರಿಷಸ್ಗೆ ಸಂಬಂಧಿಸಿದ ನಿಧಿಗಳನ್ನು ಅದಾನಿ ಗ್ರೂಪ್ ಅಪಾರದರ್ಶಕವಾಗಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಮಾಡಿದೆ.
ಜತೆಗೆ ಅದಾನಿ ಕುಟುಂಬದ ಪಾಲುದಾರಿಕೆಯನ್ನು ಮರೆ ಮಾಚಿದೆ ಎಂದು ಸಂಘಟಿತ ಅಪರಾಧ ಹಾಗೂ ಭ್ರಷ್ಟಾಚಾರ ವರದಿ ಯೋಜನೆಯಲ್ಲಿ(ಒಸಿಸಿಆರ್ಪಿ) ಆರೋಪಿಸಲಾಗಿದೆ. ಈ ಕುರಿತು ಸರಕಾರದ ನಡೆ ಪ್ರಶ್ನಿಸಿದ ರಾಹುಲ್ ಗಾಂಧಿ, ”ಜಿ20 ಶೃಂಗಸಭೆಗೂ ಮೊದಲು ಅದಾನಿಗೂ ಸರಕಾರಕ್ಕೂ ಇರುವ ಸಂಬಂಧದ ಬಗ್ಗೆ ಸ್ಪಷ್ಟತೆ ನೀಡಲಿ. ವಿದೇಶಿ ನಾಯಕರು ಅದಾನಿ ಕಂಪನಿ ಬಗ್ಗೆ ಪ್ರಶ್ನೆ ಮಾಡುವ ಮೊದಲು ಅವ್ಯವಹಾರದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕು,” ಎಂದು ಒತ್ತಾಯಿಸಿದರು.