ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಏಕಾಏಕಿ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ನಟಿ ಇದೀಗ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಹಮ್ಮಿಕೊಂಡಿದ್ದರು.
ಮಾಧ್ಯಮಗಳ ಜೊತೆ ಮದುವೆಯ ಬಗ್ಗೆ ಮಾತನಾಡಿದ ದೀಪಿಕಾ ಇದು ಸಡನ್ ಆಗಿ ಆದ ಮದುವೆ ಅಲ್ಲ ಎಂದಿದ್ದಾರೆ. ಈ ಮದುವೆ ಗೌಪ್ಯವಾಗಿ ಇರಲಿಲ್ಲ. ಕೆಲವು ತಿಂಗಳಿಂದ ಇದಕ್ಕೆ ತಯಾರಿ ಮಾಡಿದ್ದೆವು. ಸರ್ಪ್ರೈಸಿಂಗ್ ಆಗಿರಲಿ ಅಂತ ನಾವು ಅಂದುಕೊಂಡೆವು. ಹಾಗಾಗಿ ಪ್ರಚಾರ ಮಾಡಿಲ್ಲ. ಚಿಕ್ಕ ಸಮಾರಂಭದಲ್ಲಿ ನಮ್ಮದು ಡೆಸ್ಟಿನೇಷನ್ ವೆಡ್ಡಿಂಗ್ ಆಗಿರಬೇಕು ಎಂಬ ಆಸೆ ನನಗೆ ಇತ್ತು. ಕೇವಲ ಫ್ಯಾಮಿಲಿಯವರ ಎದುರು ನಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗಬೇಕು ಎಂಬ ಆಸೆ ನನ್ನದಾಗಿತ್ತು’ ಎಂದಿದ್ದಾರೆ.
‘ನನ್ನ ಆಸೆಯನ್ನು ನಾನು ದೀಪಕ್ ಅವರಿಗೆ ಹೇಳಿದೆ. ಇದೆಲ್ಲ ಸಾಧ್ಯನಾ ಅಂತ ಅವರು ಕೇಳಿದರು. ಯಾಕೆಂದರೆ ಅವರದ್ದು ದೊಡ್ಡ ಫ್ಯಾಮಿಲಿ. ಹಾಗಿದ್ದರೂ ಕೂಡ ನನ್ನ ಆಸೆಗೆ ಅವರು ಸಪೋರ್ಟ್ ಮಾಡಿದರು. ಅದಕ್ಕಾಗಿ ಅವರಿಗೆ ಧನ್ಯವಾದ. ಗೋವಾದಲ್ಲಿ ಮದುವೆ ಎಂದಾಗ ನಾಲ್ಕರಿಂದ ಐದು ತಿಂಗಳಿಂದ ಅವರೇ ಮುಂದಾಳತ್ವ ವಹಿಸಿಕೊಂಡರು. ನಾನು ಕೂಡ ತಿಂಗಳಲ್ಲಿ ಎರಡು ಬಾರಿ ಗೋವಾಗೆ ಹೋಗಿಬಂದು ಎಲ್ಲವನ್ನೂ ತಯಾರಿ ಮಾಡಿಕೊಂಡೆ’ ಎಂದು ದೀಪಿಕಾ ದಾಸ್ ಮದುವೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
‘ನಮಗೆ ಮತ್ತು ನಮ್ಮ ಕುಟುಂಬದವರಿಗೆ ಈ ಮದುವೆ ಬಗ್ಗೆ ಯಾವುದೂ ಸೀಕ್ರೆಟ್ ಆಗಿರಲಿಲ್ಲ. ಸಡನ್ ಆಗಿ ನಾವು ಮದುವೆ ಆಗಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡಿದ್ದೇವೆ. ನಾಲ್ಕು-ಐದು ವರ್ಷದಿಂದ ನಾವು ಪರಿಚಯದಲ್ಲಿ ಇದ್ದೆವು. ಮದುವೆಯ ಪ್ಲ್ಯಾನ್ ಇರಲಿಲ್ಲ. ಆದರೆ ಕಳೆದ ವರ್ಷ ಮದುವೆ ಬಗ್ಗೆ ವಿಚಾರ ಬಂತು. ಒಂದು ವರ್ಷ ಡೇಟ್ ಮಾಡಿ, ಹೊಂದಾಣಿಕೆ ಬರುತ್ತಾ ಅಂತ ನೋಡಿಕೊಂಡು ನಂತರ ಮದುವೆಯ ನಿರ್ಧಾರ ಮಾಡಿದೆವು’ ಎಂದು ದೀಪಿಕಾ ದಾಸ್ ಹೇಳಿದ್ದಾರೆ.