ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಮುನ್ನುಡಿ ಬರೆಯಲಾಗಿದ್ದು, ದಸರಾದ ಪ್ರಮುಖ ಆಕರ್ಷಣೆಯಾದ ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳನ್ನು ನಾಗರಹೊಳೆ ಅರಣ್ಯದ ಕಾಡಂಚಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿದ್ದು, ಅರಮನೆ ನಗರಿ ಮೈಸೂರಿಗೆ ಗಜಪಡೆ ಮೆರಗು ನೀಡಿವೆ. ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜುಗೊಳ್ಳುತ್ತಿವೆ. ದಸರಾ ಗಜಪಡೆಗಳನ್ನು ಕಾಡಿನಿಂದ ನಾಡಿಗೆ ಕರೆ ತರುವ ಮೂಲಕ ಈ ಬಾರಿಯ ದಸರಾಕ್ಕೆ ಮುನ್ನುಡಿ ಬರೆಯಲಾಗಿದೆ.
ಮೂರು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳ ತಂಡಕ್ಕೆ ಹುಣಸೂರು ತಾಲ್ಲೂಕು ನಾಗರಹೊಳೆ ಅಭಯಾರಣ್ಯದ ವೀರನ ಹೊಸಹಳ್ಳಿ ಗ್ರಾಮದ ಬಳಿಯ ಕಾಡಂಚಿನಲ್ಲಿ ಸ್ವಾಗತ ಕೋರಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನೆಗಳಿಗೆ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು. ಈ ಬಾರಿಯ ದಸರಾವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸುಮಾರು 30 ಕೋಟಿ ರೂ ಅನುದಾನ ಕೇಳಲಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದ್ರು.
ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು, ನಿಶಾನೆಯಾಗಿ ಕಾರ್ಯನಿರ್ವಹಿಸುವ ಅರ್ಜುನ, ಧನಂಜಯ, ಗೋಪಿ, ವರಲಕ್ಷ್ಮಿ, ವಿಜಯ, ಭೀಮ, ಮಹೇಂದ್ರ ಹಾಗೂ ಹೊಸದಾಗಿ ಕಂಜನ್ ಆನೆಗಳು ಮೊದಲ ತಂಡದಲ್ಲಿ ಆಗಮಿಸಿವೆ. ಗಜಪಡೆ ಸ್ವಾತಿಸಲು ಬೀದರ್ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ರೂ ಮೈಸೂರಿನ ಶಾಸಕರ ನಿರಾಸಕ್ತಿ ಎದ್ದು ಕಂಡು ಬಂತು. ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ಜೆಡಿಎಸ್ ಎಂಎಲ್ ಸಿ,
ಮಂಜೇಗೌಡ ಹಾಗೂ ಮೈಸೂರು ಮೇಯರ್ ಶಿವಕುಮಾರ್ ಹೊರತು ಪಡಿಸಿ ಕಾಂಗ್ರೆಸ್ ಶಾಸಕರು ಗೈರು ಹಾಜರಾಗಿದ್ರು. ಸಚಿವ ಈಶ್ವರ್ ಖಂಡ್ರೆ ಅವರೇ ಪೂಜೆ ಸಲ್ಲಿಸಿ, ಯಶಸ್ವಿ ದಸರಾ ಹಾಗೂ ನಾಡಿನ ಒಳಿತಿಗೆ ಪ್ರಾರ್ಥಿಸಿದರು. ಕಾಡಿನಿಂದ ನಾಡಿಗೆ ಆಗಮಿಸಿರುವ 9 ಆನೆಗಳನ್ನು ಲಾರಿಯಲ್ಲಿ ಕರೆತರಲಿದ್ದು, ಮೈಸೂರಿನ ಅರಣ್ಯ ಭವನ ಬಳಿ ಎಲ್ಲಾ ಆನೆಗಳೂ ವಾಸ್ತವ್ಯ ಹೂಡಲಿದ್ದು, ಸೆ. ೫ ರಂದು ಅರಮನೆ ಅಂಗಳ ಪ್ರವೇಶಿಸಲಿವೆ. ಇದರಿಂದಾಗಿ ಅರಮನೆ ನಗರಿ ಮೈಸೂರು ಗತವೈಭವಕ್ಕೆ ತೆರೆದುಕೊಳ್ಳುತ್ತಿದ್ದು, ಗಜಪಡೆ ಆಗಮ ಮೆರಗು ನೀಡಿವೆ.