ಚಾಮರಾಜನಗರ: ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ ಎಂದು ಹೇಳಿದ್ದ ಮಹಿಳೆಯನ್ನು ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ವೇದಿಕೆಯಿಂದ ಕೆಳಗಿಳಿದು ಬಂದು ಅಪ್ಪಿಕೊಂಡ ಘಟನೆ ನಡೆಯಿತು.
ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಹನೂರು ತಾಲೂಕಿನ ಹೊಸಪೋಡು ಗ್ರಾಮದ ತಿರುಮಮ್ಮ ಮಾತನಾಡಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದ್ದವು. ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದು ತಿರುಮಮ್ಮನನ್ನು ಅಪ್ಪಿಕೊಂಡರು.
ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕೊಕ್ಕಬೊರೆ ಗ್ರಾಮದ ಬೊಮ್ಮಮ್ಮ ಮಾತನಾಡಿ, ನಮಗೆ ಇಷ್ಟು ವರ್ಷಗಳಾದರೂ ವಿದ್ಯುತ್ ಇಲ್ಲ, ರಸ್ತೆಯೂ ಇಲ್ಲ, ಮನೆಗಳು ಇಲ್ಲ, ಸೂಕ್ತ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ, ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಭದ್ರತೆ ಬಿಟ್ಟು ಜನರ ಬಳಿ ಪ್ರಿಯಾಂಕಾ ಗಾಂಧಿ: ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಡೆಸಿ ಗಮನ ಸೆಳೆದರು.
ಇಂದಿನ ಸಮಾವೇಶದಲ್ಲಿ 10-12 ಸಾವಿರದಷ್ಟು ಮಂದಿ ಮಹಿಳೆಯರು ಭಾಗಿಯಾಗಿದ್ದರು. ಭಾಷಣದ ಕೊನೆಯಲ್ಲಿ ಜನರ ಕೈಯಲ್ಲಿ ಜೈ ಕರ್ನಾಟಕ ಎಂದು ಹೇಳಿಸಿದ್ದು ವಿಶೇಷವಾಗಿತ್ತು