ಮುಂಬೈ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಲಕ್ಷಣ ಸೇರಿದಂತೆ ಹಲವಾರು ಕಾರಣಗಳಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 17 ಲಕ್ಷ ಕೋಟಿ ರೂ. ಕರಗಿದೆ. ಇಂದು ಬೆಳಗ್ಗೆಯೇ ಗಿಫ್ಟ್ ನಿಫ್ಟಿ 300 ಅಂಕ ಇಳಿಕೆಯಾಗಿತ್ತು.
ಈ ಕಾರಣದಿಂದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸೆನ್ಸೆಕ್ಸ್ 2,500 ಅಂಕ ಪತಗೊಂಡರೆ ನಿಫ್ಟಿ 760 ಅಂಕ ಇಳಿಕೆಯಾಗಿದೆ.
ಪತನವಾಗಲು ಕಾರಣ ಏನು?
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು
ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಂದ ಇಸ್ರೇಲ್ನ ಮೇಲೆ ಸಂಭಾವ್ಯ ದಾಳಿಯ ಬಗ್ಗೆ ಕಳವಳಗಳು ಹೆಚ್ಚಾದ ಕಾರಣ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ಸೋಮವಾರ ದಾಳಿ ನಡೆಸಹುದು ಅಮೆರಿಕ ಹೇಳಿಕೆಯೂ ಪರಿಣಾಮ ಬೀರಿದೆ.
ಅಮೆರಿಕದ ಆರ್ಥಿಕ ಹಿಂಜರಿತ ಭೀತಿ:
ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆಗೆ ನಿರೀಕ್ಷೆಗಿಂತಲೂ ಕಡಿಮೆಯಾಗಿದೆ. ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕೇವಲ 1,14,000 ಉದ್ಯೋಗಿಳ ನೇಮಕವಾಗಿದೆ ಎಂದು ವರದಿ ಮಾಡಿದೆ. ಕಳೆದ ತಿಂಗಳು 1,75,000 ಉದ್ಯೋಗಿಗಳ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ ಪ್ರತಿ ತಿಂಗಳು 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ಅಮೆರಿಕದಲ್ಲಿ ನಿರುದ್ಯೋಗ ದರವು 4.3%ಕ್ಕೆ ಏರಿದ್ದು, ಇದು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಜಪಾನ್ನಲ್ಲಿ ಬಡ್ಡಿದರ ಏರಿಕೆ
ಹಣದುಬ್ಬರವನ್ನು ನಿಯಂತ್ರಿಸಲು ಜಪಾನಿನ ಕೇಂದ್ರ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಜಪಾನ್ (Bank Of Japan) ಬಡ್ಡಿದರವನ್ನು 0.25% ಏರಿಕೆ ಮಾಡಿದೆ ಮತ್ತು ಬಾಂಡ್ ಖರೀದಿಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮ ಜಪಾನ್ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಏಷ್ಯಾ ಸೇರಿದಂತೆ ವಿಶ್ವದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಜಪಾನ್ ನಿಕ್ಕಿ 4,451 ಅಂಕ (14%) ಇಳಿಕೆಯಾಗಿದೆ. 2011 ರ ಆರ್ಥಿಕ ಬಿಕ್ಕಟ್ಟಿನ ನಂತರ ಆಗಿರುವ ಅತಿದೊಡ್ಡ ನಷ್ಟ ಇದಾಗಿದೆ.
ಜೂನ್ ತ್ರೈಮಾಸಿಕ ವರದಿ:
ಭಾರತದ ಹಲವು ಕಂಪನಿಗಳು ನಿರೀಕ್ಷೆಗಿಂತಲೂ ಹೆಚ್ಚು ಬೆಳವಣಿಗೆ ಸಾಧಿಸಲು ವಿಫಲವಾಗಿದೆ. ಲಾಭಾಂಶ ಕಡಿಮೆ ಆಗಿರುವುದರಿಂದ ಭಾರತದ ಮಾರುಕಟ್ಟೆಯಿಂದ ಹೂಡಿಕೆದಾರರು ಹಣವನ್ನು ತೆಗೆದಿದ್ದಾರೆ.