ಲಕ್ನೋ: ಏಕದಿನ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಸತತ 5 ಪಂದ್ಯಗಳಲ್ಲೂ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಸುದೀರ್ಘ ವಿರಾಮದ ನಂತರ ಅಕ್ಟೋಬರ್ 29 ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ಸೆಣಸಲು ಭರ್ಜರಿ ತಯಾರಿ ನಡೆಸುತ್ತಿದೆ.
ಸತತ ಸೋಲಿನಿಂದ ಕಂಗೆಟ್ಟಿರುವ ಆಂಗ್ಲರನ್ನು ಮತ್ತೆ ಸೋಲಿಸಿ ಸೆಮಿ ಫೈನಲ್ ಹಾದಿಗೆ ಸನಿಹವಾಗಲು ಭಾರತ ಹಾತೊರೆಯುತ್ತಿದೆ. ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ (Ind vs Eng) 106 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 57 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಜಯ ಸಾಧಿಸಿದೆ. 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದು, 3 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದಾಗಿವೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಅತ್ಯಂತ ಕಠಿಣ ಎದುರಾಳಿ ಎಂಬುದು ಈಗಾಗಲೇ ಸಾಬೀತಾಗಿದೆ. ಆದ್ರೆ, ಈಗಾಗಲೇ 5 ಪಂದ್ಯಗಳನ್ನು ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ರೋಹಿತ್ ಶರ್ಮಾ ಪಡೆ, ಅದೇ ಮನಸ್ಥಿತಿಯಲ್ಲಿ ಆಂಗ್ಲರನ್ನು ಸದೆಬಡಿಯಲು ಕಾದು ನೋಡುತ್ತಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ ನಡೆಯುತ್ತಿರುವುದು ಕಂಡುಬಂದಿದೆ. ಕೊನೇ ಕ್ಷಣದಲ್ಲಿ ಪಂದ್ಯ ಗೆಲ್ಲುವ ಸಲುವಾಗಿ ಟೀಂ ಇಂಡಿಯಾ ಆಟಗಾರರಲ್ಲಿ ಬದಲಾವಣೆ ತರಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.
ಕೊಹ್ಲಿ ಮತ್ತೆ ಬೌಲಿಂಗ್:
ಇಂಗ್ಲೆಂಡ್ ವಿರುದ್ಧ ನೆಟ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರರು ಸಮರಾಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಸ್ಟಾರ್ ಪ್ಲೇಯರ್ ಕೊಹ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಲಕ್ನೋ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕೊಹ್ಲಿ ಟೀಂ ಇಂಡಿಯಾ ಆರಂಭಿಕ ಶುಭಮನ್ ಗಿಲ್ (Shubman Gill) ಅವರಿಗೆ ಬೌಲಿಂಗ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಲ್ಲದೇ ಅಭ್ಯಾಸದ ವೇಳೆ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮೊದಲಾದವರೂ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ರವೀಂದ್ರ ಜಡೇಜಾ ಕೂಡ ಬಲಗೈನಲ್ಲಿ ಬೌಲಿಂಗ್ ಅಭ್ಯಾಸ ಮಾಡಿರುವುದು ಕಂಡುಬಂದಿದೆ.