ಬೆಂಗಳೂರು: ನಗರವನ್ನು 5 ಭಾಗಗಳನ್ನಾಗಿ ಮಾಡುವ ಗ್ರೇಟರ್ ಬೆಂಗಳೂರು ವಿಧೇಯಕ ಪೆಂಡಿಂಗ್ ಇಟ್ಟು, ಬಿಲ್ ಸಾಧಕ-ಬಾಧಕಗಳ ಚರ್ಚೆಗೆ ಸದನ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ ಮಾಡಿದರು. ಇದಕ್ಕೆ ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಿಲ್ ಚರ್ಚೆ ಆಗಬೇಕು, ಸದನ ಸಮಿತಿ ಮಾಡಬೇಕು, ಇದನ್ನ ಪೆಂಡಿಂಗ್ ಇಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.
ಇದೇ ವೇಳೆ ವಿಪಕ್ಷ ಸದಸ್ಯರು ಸಹ ಅಶೋಕ್ ಅವರಿಗೆ ಸಾಥ್ ಕೊಟ್ಟರು. ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಕೆಶಿ, ಕಿರುಚಾಡೋದಕ್ಕೆ ಸಮಯ ಇದೆ. ಗ್ರೇಟರ್ ಬೆಂಗಳೂರು ಬಿಲ್ ವ್ಯಾಪಕವಾಗಿ ಚರ್ಚೆ ಆಗಲಿ. ವಿಪಕ್ಷಗಳ ಶಾಸಕರು ಹೇಳಿದ್ದಾರೆ, ನಮ್ಮ ಸಚಿವರು, ಶಾಸಕರು ಕೂಡ ಚರ್ಚೆ ಮಾಡಲು ಸಲಹೆ ನೀಡಿದ್ದಾರೆ. ಸದನ ಸಮಿತಿ ರಚನೆ ಮಾಡ್ತೀವಿ, ಬಿಲ್ ಪೆಂಡಿಂಗ್ ಇಡುತ್ತೇವೆ ಎಂದು ಸ್ಪಷ್ಟಪಡಿಸಿದರು.