ಪೂಂಛ್ : ಪೂಂಛ್-ಜಮ್ಮು ಹೆದ್ದಾರಿಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಐವರು ಯೋಧರು ಸಜೀವ ದಹನವಾಗಿದ್ದಾರೆ ಎಂದು ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ. ಅಂದ್ಹಾಗೆ, ಈ ಸೇನಾ ವಾಹನವು ಪೂಂಚ್ ಜಿಲ್ಲೆಯ ಭಿಂಬರ್ ಗಲಿಯಿಂದ ಸ್ಯಾಂಗಿಯೋಟ್ಗೆ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.ಈ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕಡಿಮೆ ಗೋಚರತೆಯ ಲಾಭವನ್ನ ಪಡೆದ ಉಗ್ರರು ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಉತ್ತರ ಕಮಾಂಡ್ ತಿಳಿಸಿದೆ.
ಭಯೋತ್ಪಾದಕರು ಗ್ರೆನೇಡ್ಗಳನ್ನ ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದೆ. ‘ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಐದು ಸಿಬ್ಬಂದಿ ದುರದೃಷ್ಟವಶಾತ್ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಸೈನಿಕನನ್ನ ತಕ್ಷಣ ರಾಜೌರಿಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉತ್ತರ ಕಮಾಂಡ್ ತಿಳಿಸಿದೆ.