ಬೆಂಗಳೂರು:– ಇನ್ನು ನಾಲ್ಕೈದು ದಿನದಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ನೂ ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಹೀಗಾಗಿ ಇನ್ನೂ ಹಣ ಸಿಗದವರು ಅದಾಲತ್ನಲ್ಲಿ ದೂರು ಕೊಡಲು ಸಿದ್ಧರಾಗಿ.
ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದ್ದು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಂದಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದಾಗಿ ಹೇಳಿದ್ದಾರೆ.
ಈಗಾಗಲೇ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ ದುಡ್ಡು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ತಮಗೆ ಹಣವೇ ಬರುವುದಿಲ್ಲ ಎಂದು ನಿರಾಶರಾದವರಿಗೆ ಈಗ ಹೊಸ ಆಸೆ ಚಿಗುರಿದಂತೆ ಆಗಿದೆ.
ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಆಗದ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ 9 ಲಕ್ಷಕ್ಕೂ ಅಧಿಕ ಕುಟುಂಬದವರಿಗೆ ಇನ್ನೂ ಗೃಹ ಲಕ್ಷ್ಮಿ ಹಣ ತಲುಪಿಲ್ಲ. ಹೀಗಾಗಿ ಪಡಿತರ ಚೀಟಿಯಲ್ಲಿರುವ ಬೇರೆ ಹಿರಿಯ ಮಹಿಳಾ ಸದಸ್ಯೆಯರ ಖಾತೆಗೆ ಹಣ ಹಾಕುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಈ ಸಂಬಂಧ ಗುರುವಾರ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಸುಮಾರು 50 ಸಾವಿರ ತೆರಿಗೆದಾರರು ಕೂಡ ಅರ್ಜಿ ಹಾಕಿದ್ದು, ಅರ್ಜಿಗಳನ್ನು ನಿರಾಕರಿಸಿ ಡಿಲೀಟ್ ಮಾಡಲಾಗಿದೆ.