ಬೆಂಗಳೂರು: 5 ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಷರತ್ತುಗಳನ್ನು ವಿಧಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ಜೊತೆಗೆ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುತ್ತಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ.ಹಾಗಾಗಿ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದೆ.
‘ಗೃಹಜ್ಯೋತಿ’ ಯೋಜನೆ ಬಗ್ಗೆ ಬಾಡಿಗೆ ಮನೆಯಲ್ಲಿ ವಾಸಿಸುವ ಜನರಿಗೆ ಹಲವಾರು ಗೊಂದಲಗಳಿವೆ. ಇದಕ್ಕೆ ಇಂಧನ ಇಲಾಖೆ ಸ್ಪಷ್ಟೀಕರಣ ನೀಡಿದೆ.ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ ವಿನೋದ್ ಕುಮಾರ್ ಅವರು ಬಾಡಿಗೆ ಮನೆಯಲ್ಲಿ ವಾಸಿಸುವ ಜನರ ಸಾಮಾನ್ಯ ಗೊಂದಲಗಳನ್ನು ಪರಿಹರಿಸಿದ್ದಾರೆ. ಈ ಕುರಿತು ಪ್ರಕಟಣೆ ಮೂಲಕ ಅವರು ಮಾಹಿತಿ ನೀಡಿದ್ದಾರೆ.
ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಸದರಿ ಸೌಲಭ್ಯವನ್ನು ಪಡೆಯುವುದು. ಗೃಹ ಬಳಕೆದಾರರು/ ಫಲಾನುಭವಿಗಳು ಯಾವುದಾದರೂ ತಿಂಗಳಿನಲ್ಲಿ 200 ಯುನಿಟ್ಗಳ ಬಳಕೆಯ ಮಿತಿಯನ್ನು ಮೀರಿದಲ್ಲಿ, ಯೋಜನೆಯಲ್ಲಿ ಮುಂದುವರೆಯುವರೇ?. ಹೌದು, 200 ಯುನಿಟ್ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳು ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಯುನಿಟ್ ಬಿಲ್ ಪಾವತಿ ಮಾಡಿ, ಸದರಿ ಯೋಜನೆಯಲ್ಲಿ ಮುಂದುವರಿಯುವುದು.
ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ. ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.