ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆಯನ್ನು ಸ್ವಲ್ಪ ತಡವಾಗಿ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಆಗಸ್ಟ್ 15ರಂದು ಚಾಲನೆ ನೀಡಲು ಉದ್ದೇಶಿಸಿದೆ. ತಾಂತ್ರಿಕ ಕಾರಣಗಳಿಂದ ಜೂನ್ನಲ್ಲಿಯೇ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರದ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ನೀಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡಲಿದ್ದೇವೆ ಎಂದು ಹೇಳಿದ್ದು, ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಇದಕ್ಕಾಗಿ ಮನೆ ಯಜಮಾನಿಯು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಹಾಗೂ ಯೋಜನೆಗಾಗಿ ಅರ್ಜಿ ಸಲ್ಲಿಸಬೇಕು. ಮನೆಯ ಯಜಮಾನಿ ಯಾರು ಎನ್ನುವುದನ್ನು ಮನೆಯವರೇ ತೀರ್ಮಾನಿಸಬೇಕಾಗುತ್ತದೆ. ಮನೆ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಜಮಾ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಜೂನ್ 15 – ಜುಲೈ 15 – ಅರ್ಜಿ ಸಲ್ಲಿಸಲು ಅವಕಾಶ; ಈ ಅವಧಿಯಲ್ಲಿ ಅರ್ಜಿದಾರರು ಅಂದರೆ ಮನೆ ಯಜಮಾನಿ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ವಿವರ ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಜುಲೈ 15 – ಆಗಸ್ಟ್ 15 – ಅರ್ಜಿಗಳ ಪರಿಶೀಲನೆ; ಮನೆ ಯಜಮಾನಿಯರು ಸಲ್ಲಿಸಿದ ಅರ್ಜಿಯನ್ನು ಇಲಾಖೆಯವರು ಪರಿಶೀಲನೆ ನಡೆಸಲಿದ್ದಾರೆ.
ಆಗಸ್ಟ್ 15: ಯೋಜನೆ ಜಾರಿ; ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಸಿದ್ದರಾಮಯ್ಯ ಸರಕಾರ ಚಾಲನೆ ನೀಡಲಿದೆ.
ಷರತ್ತು ಏನು?
* ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಬಿಪಿಎಲ್-ಎಪಿಎಲ್ ಯಾವುದೇ ಭೇದಭಾವ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯೋಜನೆಗೆ ಯಾವುದೇ ಆದಾಯದ ಮಿತಿ ಇಲ್ಲ ಎಂದಿರುವ ಅವರು, ಸರಕಾರಿ ನೌಕರರಿಗೂ ಇದು ಅನ್ವಯವಾಗಲಿದೆ. ನನ್ನ ಹೆಂಡತಿಗೂ ಯೋಜನೆ ಇದೆ ಎಂದಿದ್ದಾರೆ.
* ಅರ್ಜಿ ಸಲ್ಲಿಸಲು ಆಫ್ಲೈನ್, ಆನ್ಲೈನ್ ಎರಡರಲ್ಲೂ ಅವಕಾಶ ನೀಡಲಾಗುವುದು. ಇದಕ್ಕಾಗಿ ಸಾಫ್ಟ್ವೇರ್ ತಯಾರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.