ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಜುನೈದ್ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ‘ಮಹಾರಾಜ್’ ಜೂನ್ 14ರಂದು ತೆರೆ ಕಾಣಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ. ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಬೇಕಿದ್ದ ಈ ಸಿನಿಮಾಗೆ ಕಾನೂನಿನ ತೊಡಕು ಉಂಟಾಗಿದೆ. ಆದ್ದರಿಂದ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ‘ಮಹಾರಾಜ್’ ಚಿತ್ರತಂಡ ನಿರ್ಧರಿಸಿದೆ.
ನೈಜ ಘಟನೆಯನ್ನು ಆಧರಿಸಿ ಸೌರಭ್ ಶಾ ಬರೆದ ‘ಮಹಾರಾಜ್’ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಹಾನಿ ಆಗುವಂತಹ ಅಂಶಗಳು ಇಲ್ಲ ಎಂದು ಕೃತಿಯ ಲೇಖಕ ಸೌರಭ್ ಶಾ ಹೇಳಿದ್ದಾರೆ. ಹಾಗಿದ್ದರೂ ಕೂಡ ‘ಮಹಾರಾಜ್’ ಚಿತ್ರದ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ‘ಮಹಾರಾಜ್’ ಸಿನಿಮಾಗೆ ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ ಬಂಡವಾಳ ಹೂಡಿದೆ.
ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಇದೆ ಎನ್ನುವಾಗ ಗುಜರಾತ್ ಹೈಕೋರ್ಟ್ನಿಂದ ತಡೆ ಬಂದಿರುವುದರಿಂದ ಚಿತ್ರತಂಡಕ್ಕೆ ತೊಂದರೆ ಆಗಿದೆ. ಆದ್ದರಿಂದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ ಹಾಗೂ ಒಟಿಟಿ ಪ್ರಕಾರ ಹಕ್ಕು ಪಡೆದುಕೊಂಡಿರುವ ‘ನೆಟ್ಫ್ಲಿಕ್ಸ್’ ಸಂಸ್ಥೆಗಳು ನಿರ್ಧರಿಸಿವೆ ಎನ್ನಲಾಗುತ್ತಿದೆ.
‘ಮಹಾರಾಜ್’ ಸಿನಿಮಾದಲ್ಲಿ ಜುನೈದ್ ಖಾನ್ ಜೊತೆ ‘ಪಾತಾಳ್ ಲೋಕ್’ ಖ್ಯಾತಿಯ ಜೈದೀಪ್ ಅಹಲಾವತ್, ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿ ಶಾಲಿನಿ ಪಾಂಡೆ ಕಾಣಿಸಿಕೊಂಡಿದ್ದಾರೆ.