ಹಾವೇರಿ : ಅಮುಲ್ ಹಾಲಿನ ವಿವಾದದ ಬಳಿಕ ಈಗ ಗುಜರಾತ್ ಮೆಣಸು ಮಾರುಕಟ್ಟೆಯಲ್ಲಿ ಗದ್ದಲ ಸೃಷ್ಟಿಸಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶದ ಪ್ರಸ್ತಾವನೆ ಸಿಕ್ಕಾಪಟ್ಟೆ ರಾಜಕೀಯ ಗದ್ದಲ ಸೃಷ್ಟಿಸಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಸಮಯದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಬೆಂಗಳೂರು ಮಾರುಕಟ್ಟೆಯಲ್ಲಿ ಆನ್ಲೈನ್ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ರಾಜ್ಯದ ನಂದಿನಿ ಬ್ರ್ಯಾಂಡ್ ಗೆ ಸಡ್ಡು ಹೊಡೆಯಲು ಅಮುಲ್ ಮುಂದಾಗಿದೆ ಎಂದು ‘ಬಾಯ್ಕಾಟ್ ಅಮುಲ್, ಸೇವ್ ನಂದಿನಿ’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಭಿಯಾನ ಪ್ರಾರಂಭಿಸಿದ್ದರು. ಈಗ ಗುಜರಾತಿ ಮೆಣಸಿನ ತಳಿ ‘ಪುಷ್ಪ’ ರಾಜ್ಯದ ಬ್ಯಾಡಗಿ ಮೆಣಸಿನ ತಳಿಗೆ ಪೈಪೋಟಿ ನೀಡಲು ಮುಂದಾಗಿದೆ. ‘ಲಾಲಿ’ ಎಂಬ ಹೆಸರಿನಿಂದ ಕೂಡ ಕರೆಯಲ್ಪಡುವ ‘ಪುಷ್ಪ’ ಏಷ್ಯಾದಲ್ಲಿ ಅತೀದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬ್ಯಾಡಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೂಲಗಳ ಪ್ರಕಾರ ಕನಿಷ್ಠ 20 ಸಾವಿರ ಕ್ವಿಂಟಾಲ್ ಗುಜರಾತಿ ಮೆಣಸು ಇತ್ತೀಚಿನ ಕೆಲವು ತಿಂಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.
ಪುಷ್ಪ ಸ್ಥಳೀಯ ಬ್ಯಾಡಗಿ ಮೆಣಸಿನ ತಳಿಗಳಾದ ಡಬ್ಬಿ ಹಾಗೂ ಕಡ್ಡಿಗೆ ಪ್ರತಿಸ್ಪರ್ಧಿ ಅಲ್ಲದಿದ್ದರೂ ಈ ಗುಜರಾತಿ ಮೆಣಸಿನ ತಳಿ ಬೃಹತ್ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ. ಇನ್ನು ಪುಷ್ಪ ಮೆಣಸು ಸ್ಥಳೀಯ ತಳಿಗಳಿಗಿಂತ ಗಾಢ ಕೆಂಪು ವರ್ಣ ಹೊಂದಿದೆ. ಆದರೆ, ಈ ಮೆಣಸಿನ ಬಣ್ಣ ದೀರ್ಘ ಸಮಯದ ತನಕ ಇರುವುದಿಲ್ಲ ಕೂಡ. ಬ್ಯಾಡಗಿ ಮಾರುಕಟ್ಟೆಯ ಮೂಲಗಳ ಪ್ರಕಾರ ಕನಿಷ್ಠ 70 ಮೆಣಸು ಮಾರಾಟಗಾರರು ಮಾರುಕಟ್ಟೆ ಸಮೀಪದ ವಿವಿಧ ಕೋಲ್ಡ್ ಸ್ಕೋರೇಜ್ ಗಳಲ್ಲಿ ಒಂದಿಷ್ಟು ಪ್ರಮಾಣದ ಗುಜಾರಾತ್ ಮೆಣಸುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಬ್ಯಾಡಗಿ ಮೆಣಸಿನ ಬೆಲೆಯಲ್ಲಿನ ದಿಢೀರ್ ಏರಿಕೆಯ ಲಾಭ ಪಡೆದ ಪುಷ್ಪ ಮೆಣಸಿನ ತಳಿ ಎಪಿಎಂಸಿ ಮಾರುಕಟ್ಟೆ ಮೂಲಕ ಪ್ರವೇಶಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಹಾಗೆಯೇ ಮಾರಾಟ ಕೂಡ ಆಗಿದೆ.
‘ಬ್ಯಾಡಗಿ ಮೆಣಸಿನ ಮಾರುಕಟ್ಟೆ ತನ್ನದೇ ಆದ ಗುರುತು ಬೆಳೆಸಿಕೊಂಡಿದೆ. ಈ ಮಾರುಕಟ್ಟೆಡಬ್ಬಿ ಹಾಗೂ ಕಡ್ಡಿ ಮೆಣಸಿನ ತಳಿಗಳ ಮೇಲೆ ಆಧಾರಿತವಾಗಿದೆ ಕೂಡ. ಹಲವು ವರ್ಷಗಳಿಂದ ವಿವಿಧ ದೇಶಗಳು ಹಾಗೂ ಕಂಪನಿಗಳು ಬ್ಯಾಡಗಿ ಮೆಣಸನ್ನು ಖರೀದಿಸುತ್ತಿವೆ. ಹೀಗಿರುವಾಗ ಸ್ಥಳೀಯ ಮೆಣಸು ಮಾರುಕಟ್ಟೆಯ ಖ್ಯಾತಿಗೆ ಯಾವುದೇ ಹಾನಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ರಾಣಿಬೆನ್ನೂರು ತಾಲೂಕಿನ ರೈತ ರಾಮಣ್ಣ ಸುಡಂಬಿ ಮನವಿ ಮಾಡಿದ್ದಾರೆ.
‘ಈ ಋತುವಿನಲ್ಲಿ ಗುಜರಾತ್ ಮೆಣಸುಗಳ ಪೂರೈಕೆಯಲ್ಲಿ ನಿಧಾನಗತಿಯ ಏರಿಕೆ ಕಂಡುಬಂದಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ಬಳಿಕ ಖರೀದಿದಾರರು ಕೃಷಿ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಿಂದ ಕೂಡ ಖರೀದಿಸಬಹುದಾಗಿದೆ. ಇದಕ್ಕೆ ಯಾವುದೇ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಎಪಿಎಂಸಿಗೆ ಇದರ ಪೂರೈಕೆ ನಿರ್ಬಂಧಿಸೋದು ಕಷ್ಟವಾಗಲಿದೆ’ ಎಂದು ಬ್ಯಾಡಗಿ ಎಪಿಎಂಸಿ ಹೆಚ್ಚುವರಿ ನಿರ್ದೇಶಕ ಹಾಗೂ ಕಾರ್ಯದರ್ಶಿ ಎಚ್. ವೈ. ಸತೀಶ್ ತಿಳಿಸಿದ್ದಾರೆ.
ಏನಿದು ಅಮುಲ್ ವಿವಾದ?
‘ಅಮುಲ್ ಕನ್ನಡ’ ಎಂಬ ಟ್ವಿಟ್ಟರ್ ಖಾತೆಯಲ್ಲಿ ‘ಅಮುಲ್ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಆರ್ಡರ್ ಮಾಡಿದರೆ ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ. ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ’ ಎಂಬಿತ್ಯಾದಿ ಮಾಹಿತಿಗಳನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳದ್ದೇ ಸಿಂಹಪಾಲಿದೆ. ಹೀಗಿರುವಾಗ ನಂದಿನಿಗೆ ಸಡ್ಡು ನೀಡಲು ಅಮುಲ್ ರಣತಂತ್ರ ಹೂಡಿದೆ ಎಂದು ಆರೋಪಿಸಲಾಗಿದೆ.