ಗಾಂಧಿನಗರ: ಬಿಪರ್ ಜಾಯ್ ಚಂಡಮಾರುತ (Biparjoy Cyclone) ಗುಜರಾತ್ನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಗುರುವಾರ ಮಧ್ಯರಾತ್ರಿ ನಂತರ ಸೈಕ್ಲೋನ್ ಕಛ್ ಬಳಿ ತೀರವನ್ನು ಪೂರ್ಣಪ್ರಮಾಣದಲ್ಲಿ ದಾಟಿದ್ದು, ಕ್ರಮೇಣ ದುರ್ಬಲಗೊಳ್ತಿದೆ. ಸದ್ಯ ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಕರಾಚಿಯತ್ತ ತೆರಳುತ್ತಿದೆ. ಯಾವುದೇ ಕ್ಷಣದಲ್ಲಿ ಇದು ವಾಯುಭಾರ ಕುಸಿತವಾಗಿ ಬದಲಾಗಲಿದೆ. ಬಿಪರ್ ಜಾಯ್ ತೀರ ದಾಟುವ ಸಂದರ್ಭದಲ್ಲಿ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ.
ಬಿರುಗಾಳಿ ಸಹಿತ ಭಾರೀ ಮಳೆ ದೊಡ್ಡ ಮಟ್ಟದಲ್ಲಿ ಅನಾಹುತ ಸೃಷ್ಟಿಸಿದೆ. ಅನೇಕ ಕಡೆ ಸಾವಿರಾರು ಮರಗಿಡಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. 500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಕಾರ್ಯಕ್ರಮವೊಂದಕ್ಕೆ ಹಾಕಿದ್ದ ಬೃಹತ್ ಟೆಂಟ್ ಧರಾಶಾಯಿಯಾಗಿದೆ.
ಮನೆ ಶೀಟ್ಗಳು, ಹೋರ್ಡಿಂಗ್ಗಳು ತರಗೆಲೆಯಂತೆ ಹಾರಿವೆ. 1000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ದಿಢೀರ್ ಪ್ರವಾಹ ಸೃಷ್ಟಿಯಾಗಿ ತಗ್ಗು ಪ್ರದೇಶಗಳೆಲ್ಲಾ ಜಲಮಯವಾಗಿವೆ. ಮಾಂಡ್ವಿಯಲ್ಲಿ ಹಲವು ಮನೆ, ಆಸ್ಪತ್ರೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ನಿನ್ನೆಯಿಂದ ನೂರಕ್ಕೂ ಹೆಚ್ಚು ರೈಲು ಬಂದ್ ಆಗಿವೆ. ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗ್ತಿದೆ.