ಅಹಮದಾಬಾದ್: ಶುಭಮನ್ ಗಿಲ್ ಭರ್ಜರಿ ಅರ್ಧಶತಕ ಹಾಗೂ ಕೊನೆಯಲ್ಲಿ ರಶೀದ್ ಖಾನ್, ರಾಹುಲ್ ತೆವಾಟಿಯಾ ಸಿಕ್ಸರ್, ಬೌಂಡರಿ ಆಟದ ನೆರವಿನಿಂದ ಗುಜರಾತ್ ಟೈಟಾನ್ಸ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. 179 ರನ್ಗಳ ಗುರಿ ಪಡೆದ ಟೈಟಾನ್ಸ್ 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ 5 ವಿಕೆಟ್ಗಳ ಜಯ ಸಾಧಿಸಿತು.
ಕೊನೆಯ 2 ಓವರ್ಗಳಲ್ಲಿ 25 ರನ್ ಬೇಕಿತ್ತು. ಈ ವೇಳೆ ಮೊದಲ ಎಸೆತವನ್ನು ವಿಫಲವಾಗಿಸಿಕೊಂಡರು. 2ನೇ ಎಸೆತದಲ್ಲಿ ಬಾಲ್ ಎದುರಿಸಲಾಗದಿದ್ದರೂ ಬೈಸ್ನಿಂದ 4 ರನ್ ತಂಡಕ್ಕೆ ಸೇರ್ಪಡೆಯಾಯಿತು. ಮೂರನೇ ಎಸೆತಲ್ಲಿ ಕೇವಲ 1 ರನ್ ಗಳಿಸಿ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕಣಕ್ಕಿಳಿದ ರಶೀದ್ ಖಾನ್ 4ನೇ ಎಸೆತವನ್ನ ಸಿಕ್ಸರ್ಗೆ, 5ನೇ ಎಸೆತವನ್ನು ಬೌಂಡರಿಗೆ ಚಚ್ಚಿ ತಂಡ ನಿರಾಯಾಸವಾಗಿ ಗೆಲ್ಲುವಂತೆ ಮಾಡಿದರು. ಕೊನೆಯ ಓವರ್ನಲ್ಲಿ ತೆವಾಟಿಯಾ ಮೊದಲ ಎರಡು ಎಸೆತದಲ್ಲೇ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ಗೆಲುವಿನ ನಗೆ ಬೀರಿದರು. ರಾಹುಲ್ ತೆವಾಟಿಯಾ, ರಶೀದ್ ಖಾನ್ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ, ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್ ಪತನಕ್ಕೆ 3.5 ಓವರ್ಗಳಲ್ಲಿ 37 ರನ್ ಸಿಡಿಸಿತ್ತು. ಈ ವೇಳೆ ಸಹಾ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬಂದ ಸಾಯಿ ಸುದರ್ಶನ್ 17 ಎಸೆತಗಳಲ್ಲಿ 22 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು.
ಗಿಲ್ ಭರ್ಜರಿ ಬ್ಯಾಟಿಂಗ್:
ಇನ್ನೂ ಗುಜರಾತ್ ಟೈಟಾನ್ಸ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಗಿಲ್ 36 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 6 ಬೌಂಡರಿ) ಗಳಿಸಿದರು. ಈ ನಡುವೆ ವಿಜಯ್ ಶಂಕರ್ 21 ಎಸೆತಗಳಲ್ಲಿ 27 ರನ್ ಗಳಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಕ್ರೀಸ್ಗಿಳಿದ ರಶೀದ್ ಖಾನ್ 3 ಎಸೆತಗಳಲ್ಲಿ 10 ರನ್, ರಾಹುಲ್ ತೆವಾಟಿಯಾ 14 ಎಸೆತಗಳಲ್ಲಿ 15 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು.ಸಿಎಸ್ಕೆ ಪರ ರಾಜವರ್ಧನ್ ಹಂಗರಗೇಕರ್ 3 ವಿಕೆಟ್ ಪಡೆದರೆ, ತುಷಾರ್ ದೇಶ್ಪಾಂಡೆ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಋತುರಾಜ್ ಗಾಯಕ್ವಾಡ್ ಸ್ಪೋಟಕ ಪ್ರದರ್ಶನ ನೀಡಿ ಮಿಂಚಿದರು. ಸಿಎಸ್ಕೆ ಪರ ಏಕಾಂಗಿ ಹೋರಾಟ ನಡೆಸಿದರು. 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಋತುರಾಜ್ 50 ಎಸೆತಗಳಲ್ಲಿ 92 ರನ್ (4 ಬೌಂಡರಿ, 9 ಸಿಕ್ಸರ್) ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. ಉಳಿದಂತೆ ಮೊಯೀನ್ ಅಲಿ ಅವರ 23 ರನ್ ಸಿಎಸ್ಕೆ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಎನಿಸಿತು. ಇನ್ನಿಂಗ್ಸ್ ಮಧ್ಯದಲ್ಲಿ ವಿಕೆಟ್ಗಳನ್ನು ಕಳೆದುಕೊಂಡರೂ ಸಿಎಸ್ಕೆ ತನ್ನ 20 ಓವರ್ಗಳಲ್ಲಿ 7 ವಿಕೆಟ್ಗೆ 178 ರನ್ಗಳ ಸವಾಲಿನ ಮೊತ್ತ ದಾಖಲಿಸಿತು.
ಕೊನೆಯಲ್ಲಿ ಅಬ್ಬರಿಸಿದ ಮಹಿ: ಈ ಪಂದ್ಯದಲ್ಲಿ ಎಂ.ಎಸ್ ಧೋನಿ ಬ್ಯಾಟಿಂಗ್ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಮೈದಾನದಲ್ಲಿ ನೆರೆದಿದ್ದರು. ಈ ಅಭಿಮಾನಿಗಳಿಗೆ ಮಾಹಿ ನಿರಾಸೆಯನ್ನುಂಟು ಮಾಡಲಿಲ್ಲ. 8ನೇ ವಿಕೆಟ್ಗೆ ಕಣಕ್ಕಿಳಿದ ಮಹಿ ಕೊನೆಯ ಓವರ್ನಲ್ಲಿ ಅಬ್ಬರಿಸಿದರು. ಒಂದು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಧೋನಿ 7 ಎಸೆತಗಳಲ್ಲಿ 14 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 180ರ ಸನಿಹಕ್ಕೆ ತಲುಪಿಸಿದರು. ಬೆನ್ ಸ್ಟೋಕ್ಸ್ 7 ರನ್, ಅಂಬಟಿ ರಾಯುಡು 12 ರನ್, ಶಿವಂ ದುಬೆ 19 ರನ್, ರವೀಂದ್ರ ಜಡೇಜಾ 1 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿ ಅಜೇಯರಾಗುಳಿದರು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಶಮಿ, ರಶೀದ್ ಖಾನ್, ಅಲ್ಝರಿ ಜೋಸೆಫ್ ತಲಾ 2 ವಿಕೆಟ್ ಪಡೆದರೆ, ಜೋಶ್ ಲಿಟಲ್ 1 ವಿಕೆಟ್ ಕಿತ್ತರು.