ಬೆಂಗಳೂರು: ಕರ್ನಾಟಕದ ಮೇಲೆ ಅಮುಲ್ ಹೇರಿಕೆ ಮಾಡಲಾಗುತ್ತಿದೆ. ಇದರ ಹಿಂದೆ ಗುಜರಾತ್ ಬೆಳೆಯಬೇಕು, ಕರ್ನಾಟಕ ಮುಚ್ಚಬೇಕೆಂಬ ಆಶಯ ಇದ್ದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದರು. ಜತೆಗೆ, ಬೆಳಗಾವಿಯ 865 ಹಳ್ಳಿಗಳಿಗೆ ಮಹಾರಾಷ್ಟ್ರ ಆರೋಗ್ಯ ವಿಮೆ ಯೋಜನೆ ನೀಡಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ರಾಜ್ಯದ ನೆಲ, ಜಲ ಉಳಿಸುವವರು ಈಗ ಮಾತೇ ಆಡುತ್ತಿಲ್ಲವಲ್ಲ? ರಾಜ್ಯದ ನೆಲ, ಜಲ, ಭಾಷೆ ಕಾಪಾಡಿ ಜನರ ಹಿತ ಕಾಯುವ ಪ್ರತಿಜ್ಞೆ ಮಾಡುವ ಮೂಲಕ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಾವೇನೋ ಚುನಾವಣೆಯಲ್ಲಿ ವ್ಯಸ್ತರಾಗಿದ್ದೇವೆ. ಜತೆಗೆ, ಸಿನಿಮಾ ನಟರು, ಕನ್ನಡ ಪರ ಹೋರಾಟಗಾರರು ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣ ಎಂದರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್ ಇದ್ದಂತೆ. ಕಾಂಗ್ರೆಸ್ಗೆ ಸೇರಿಸಿಕೊಳ್ಳುವಾಗ ಟಿಕೆಟ್ ಕೊಡುವುದಾಗಿ ಹೇಳಿರಲಿಲ್ಲ. ಬೇಷರತ್ ಆಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದೆವು. ಪಕ್ಷಕ್ಕೆ ಸೇರಿದವರೆಲ್ಲರಿಗೂ ಟಿಕೆಟ್ ಕೊಡಲು ಆಗುವುದಿಲ್ಲ. ಅಸಮಾಧಾನ ಇರುವವರನ್ನು ಕರೆದು ಮಾತನಾಡುತ್ತೇವೆ, ಅಸಮಾಧಾನ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.